ಜನರ ತೀರ್ಪಿಗೆ ತಲೆ ಬಾಗುವೆ; ಕಾರ್ಯಕರ್ತರ ಜತೆ ನಿಲ್ಲುವೆ- ನಿಖಿಲ್

Spread the love

ಬಿಡದಿ: ಚನ್ನಪಟ್ಟಣದ ಜನತೆ ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ, ಅವರ ಅದೇಶವನ್ನು ಒಪ್ಪಿಕೊಳ್ಳುತ್ತೇನೆ, ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಳಿಕ
ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್,ಸೋತೆನೆಂದು ಎದೆಗುಂದುವ ಪ್ರಶೆ ಇಲ್ಲ,ಹಾಗೆಂದು ಸುಮ್ಮನೇ ಕೂರುವುದಿಲ್ಲ, ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಜನರ ಆದೇಶವೇ ಅಂತಿಮ. ಅವರ ತೀರ್ಪಿಗೆ ತಲೆಬಾಗುತ್ತೇನೆ. ಇದು ನನಗೆ ಮೂರನೇ ಸೋಲು. ಈ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡುತ್ತೇನೆ. ಕ್ಷೇತ್ರದ ಜನತೆ ಜತೆ ನಿರಂತರವಾಗಿ ಇರುತ್ತೇನೆ, ಅವರ ಸೇವೆ ಮಾಡುತ್ತೇನೆ. ನನ್ನ ಪರವಾಗಿ ಚುನಾವಣೆಯಲ್ಲಿ ಹಗಲು ರಾತ್ರಿ ಅವಿರತವಾಗಿ ಕೆಲಸ ಮಾಡಿದ ಜೆಡಿಎಸ್ ಬಿಜೆಪಿಯ ಎಲ್ಲಾ ಕಾರ್ಯಕರ್ತರು, ಮುಖಂಡರು ಸೇರಿದಂತೆ ಎಲ್ಲರಿಗೂ ಶಿರಬಾಗಿ ನಮಿಸುತ್ತೇನೆ ಎಂದು ತಿಳಿಸಿದರು.

ಇದು ನಾನು ಬಯಸದೇ ಬಂದ ಉಪ ಚುನಾವಣೆ. ಕಡೆ ಗಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರ. ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೇನೆ. 87,031 ಜನರು ನನ್ನ ಪರವಾಗಿ ಮತ ಹಾಕಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡಲಾರೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನಾನು ಕೆಲ ಮಾತು ಕೊಟ್ಟಿದ್ದೇನೆ. ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಹೇಳಿದರು.

ಒಂದು ನಿರ್ದಿಷ್ಟ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಕ್ರೋಢೀಕರಣ ಆಗಿವೆ. ಆ ಸಮುದಾಯದ ಪರವಾಗಿಯೂ ನಮ್ಮ ಪಕ್ಷ ಹೋರಾಟ ನಡೆಸಿತ್ತು.ದೇವೇಗೌಡರು ಮೀಸಲಾತಿ ನೀಡಿದ್ದರು. ಅವರಿಗೆ ದೇವೇಗೌಡರು, ಕುಮಾರಸ್ವಾಮಿ ಅವರು ಸಾಕಷ್ಟು ಒಳ್ಳೆಯದು ಮಾಡಿದ್ದಾರೆ. ಆದರೂ ಆ ಸಮುದಾಯ ನಮ್ಮ ಪರ ಮತ ಹಾಕಿಲ್ಲ, ಈ ಬಗ್ಗೆ ಹೆಚ್ಚು ಚರ್ಚೆ ಮಾಡಲು ನಾನು ಬಯಸುವುದಿಲ್ಲ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.