ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕು ಅಣ್ಣೂರು, ಭೀಮನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಐದು ವರ್ಷಗಳಾದರೂ ಇದುವರೆಗೆ ರಿಪೇರಿ ಮಾಡಿಸದ ಕಾರಣ ಗ್ರಾಹಕರು ಶುದ್ಧ ನೀರಿಗೆ ತೊಂದರೆ ಪಡುವಂತಾಗಿದೆ.
ಈ ನೀರಿನ ಘಟಕ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲೇ ಇದೆ.ಇದೇ ರಸ್ತೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿರುವುದು ಯಾರ ಗಮನಕ್ಕೂ ಬರುವುದೇ ಇಲ್ಲ.
ಗ್ರಾಮೀಣ ಕುಡಿಯುವ ನೀರಿನ ಘಟಕದ ಇಂಜಿನಿಯರ್ ಗಳು ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿದ್ದಾರೆ.ಆದರೆ ಇದು ಕೆಟ್ಟು ಹೋಗಿದ್ದರೂ ಇತ್ತ ತಿರುಗಿ ನೋಡುವುದಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮನಹಳ್ಳಿಯ ಜನ 5 ರೂ ಕಾಯಿನ್ ಹಾಕಿ ಒಂದು ಕ್ಯಾನ್ ನೀರು ತೆಗೆದುಕೊಂಡು ಹೋಗುತ್ತಿದ್ದರು.ಈಗ ದೂರದ ಊರಿಗೆ ಅಲೆಯುವಂತಹ ಪರಿಸ್ಥಿತಿ ಬಂದಿದೆ ಜತೆಗೆ ಹೆಚ್ಚು ಹಣ ತೆರಬೇಕೆಂದು ಜನ ಬೇಸರ ಪಡುತ್ತಿದ್ದಾರೆ ಇದು ಜನಪ್ರತಿನಿಧಿಗಳಿಗೆ ತಿಳಿಯುವುದಿಲ್ಲವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಮೀಣ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂದು ಸರ್ಕಾರ ಆಯಾಯ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಪ್ಲಾಂಟ್ ಗಳನ್ನು ಹಾಕಿಸಿದೆ, ಕೇವಲ ಐದು ರೂಪಾಯಿ ಕೊಟ್ಟರೆ ಶುದ್ಧ ನೀರು ಸಿಗುತ್ತದೆ. ಆದರೆ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಧೋರಣೆಯಿಂದ ಜನ ಕುಡಿಯುವ ನೀರಿಗೆ ತೊಂದರೆ ಪಡುವಂತಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಹಾಕಲು ಕೋಟ್ಯಂತರ ರೂ ವೆಚ್ಚವಾಗುತ್ತದೆ.ಈಗ ಇದು ಹಾಳಾಗಿದೆ,ಹೀಗೆ ಬೇಕಾಬಿಟ್ಟಿ ಹಣ ಪೋಲು ಮಾಡುತ್ತಾರೆ.
ಕೂಡಲೇ ಸ್ಥಳೀಯ ಶಾಸಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ
