ಭದ್ರಾವತಿ ತಾಲ್ಲೂಕು ರಾಕ್ಷಸರ ಕೈನಲ್ಲಿ ಸಿಲುಕಿದೆ – ನಿಖಿಲ್ ಕುಮಾರಸ್ವಾಮಿ

Spread the love

ಭದ್ರಾವತಿ: ಭದ್ರಾವತಿ ತಾಲ್ಲೂಕು ರಾಕ್ಷಸರ ಕೈಗೆ ಹೋಗಿ ಸಿಲುಕಿದೆ,ಇದನ್ನ ರಾಮ ರಾಜ್ಯ ಕ್ಷೇತ್ರವನ್ನಾಗಿ ಮಾಡಬೇಕು,ಅಂತಹ ಪರಿವರ್ತನೆ ಮಾಡುವ ಶಕ್ತಿ ಕ್ಷೇತ್ರದ ಜನತೆಗೆ ಇದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಭದ್ರಾವತಿಯಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭದ್ರಾವತಿ ಶಾಸಕರ ಬಿ.ಕೆ ಸಂಗಮೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಿಸ್ಟರ್ ಶಾಸಕರೇ ಇವತ್ತಿನ ದಿನಾಂಕ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನೀವೇನಾದರೂ ಶಾಸಕರಾದರೆ ಭದ್ರಾವತಿಗೆ ನನ್ನ ಜೀವನದಲ್ಲಿ ಕಾಲಿಡೋದಿಲ್ಲ ಎಂದು ನಿಖಿಲ್ ಶಪಥ ಮಾಡಿದರು.

ಭದ್ರಾವತಿ ತಾಲ್ಲೂಕಿನಲ್ಲಿ ಆಗುತ್ತಿರುವ ದೌರ್ಜನ್ಯ, ದಬ್ಬಾಳಿಕೆ. ಅಹಂಕಾರ ಇವೆಲ್ಲಾವನ್ನ ಮೆಟ್ಟಿ ನಿಲ್ಲುವಂತ ಶಕ್ತಿ ಕ್ಷೇತ್ರದ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿದೆ, ಅಪ್ಪಾಜಿ ಗೌಡರು ಅದನ್ನ ಎಲ್ಲರ ರಕ್ತದ ಕಣ ಕಣದಲ್ಲೂ ರೂಡಿಸಿದ್ದಾರೆ ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು

ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಪಾರದರ್ಶಕ ವಾಗಿ ಕೆಲಸ ಮಾಡುವುದಕ್ಕೆ ಕೈ ಕಟ್ಟಿಹಾಕಿ ಕ್ಷೇತ್ರದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್, ಮಟ್ಕಾ ಮತ್ತಿತರ ದಂಧೆಗಳಿಗೆ ಎಡೆ ಮಾಡಿದ್ದಾರೆ, ಯುವ ಸಮುದಾಯವನ್ನ ಅವರ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಶಾಸಕ ಬಿ.ಕೆ ಸಂಗಮೇಶ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ಅಪ್ಪಾಜಿಗೌಡರನ್ನ ಅನೇಕ ಬಾರಿ ಶಾಸಕರನ್ನಾಗಿ ಮಾಡಿದ್ದೀರಿ. ಕ್ಷೇತ್ರದಲ್ಲಿ ಒಬ್ಬ ಹೆಣ್ಣು ಮಗಳಿಗೆ ನೀವು ಧಮ್ಕಿ ಹಾಕಿದ್ರೆ ಮನೆಗೆ ಹೋಗಿ ಸೇರ್ಕೊಳ್ತಾರೆ ಅಂತ ನಿಮ್ಮ ಮನಸ್ಸಿನಲ್ಲಿ ಇದ್ರೆ ಅದು ನಿಮ್ಮ ಕನಸು, ಶಾರದಾ ಅಪ್ಪಾಜಿಗೌಡರ ಜೊತೆ ದೇವೇಗೌಡರು, ಕುಮಾರಣ್ಣ, ನಿಖಿಲ್ ಕುಮಾರಸ್ವಾಮಿ, ಇದಕ್ಕಿಂತ ಮಿಗಿಲಾಗಿ ಕ್ಷೇತ್ರದ ಜನತೆ ಇದ್ದಾರೆ ಎಂದು ತಿಳಿಸಿದರು.

ಜನತಾ ದಳ ಪಕ್ಷದ ಕಾರ್ಯಕರ್ತರು ಹೆದರಿ ಓಡಿ ಹೋಗುವ ಸಂಸ್ಕೃತಿ ನಮ್ಮದಲ್ಲ, ಕಾಂಗ್ರೆಸ್ ಪಕ್ಷ ಕಳೆದ ಎರಡು ವರ್ಷಗಳ ಆಡಳಿತದಲ್ಲಿ ಸ್ವತಂತ್ರ್ಯವಾಗಿ, ಪಾರದರ್ಶಕವಾಗಿ ಕೆಲಸ ಮಾಡುವಂತಹ ಸಂಸ್ಥೆಗಳನ್ನು ಕೈ ಕಟ್ಟಾಕಿ,ತಮಗೆ ಬೇಕಾದಂತಹ ರೀತಿಯಲ್ಲಿ ಬಳಕೆ ಮಾಡಿಕೊಂಡಿರುವ ಸಾಕಷ್ಟು ನಿದರ್ಶನ ನಮ್ಮ ಕಣ್ಮುಂದೆ ಇದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಸಂಖ್ಯಾ ಬಲ ಕುಸಿಯುತ್ತಿದೆ ಎಂದು ಸವಾಲು ಹಾಕಿದ್ದಾರೆ. ಅವರ ಸವಾಲನ್ನು ನಾವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ, ಮುಂಬರುವ 2028 ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅವರಿಗೆ ತಕ್ಕ ಉತ್ತರ ಕೊಡೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡರು ನಿಮ್ಮೆಲ್ಲರ ಸಹಕಾರದಿಂದ 2028ಕ್ಕೆ ಶಾಸಕರಾಗಿ ಆಯ್ಕೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಶಾರದಾ ಪೂರ್ಯನಾಯ್ಕ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಬೋಜೇಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ ಮತ್ತಿತರರು ಹಾಜರಿದ್ದರು.