ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಕಾರ್ಖಾನೆಗೆ ಮರುಜೀವ:ಹೆಚ್ ಡಿ ಕೆ

Spread the love

ಮಂಡ್ಯ: ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸುಮಾರು 15,000 ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ, ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ, ಆ ನಿಟ್ಟಿನಲ್ಲಿ ಭದ್ರಾವತಿ ಕಾರ್ಖಾನೆಗೆ ಮರುಜೀವ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಮೈಸೂರು ಮಹಾ ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಆಗಿತ್ತು. ಸಾವಿರಾರು ಜನರಿಗೆ ಅಲ್ಲಿ ಉದ್ಯೋಗ ಸಿಕ್ಕಿತ್ತು ಲಕ್ಷಾಂತರ ಜನರು ಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದರು. ಅಂತಹ ವೈಭವದ ದಿನಗಳು ಮರುಕಳಿಸುವ ದಿನಗಳು ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದ ಕೆಆರ್ ಎಸ್ ಬಳಿ ಐಐಟಿ ಸ್ಥಾಪನೆ ಮಾಡುವ ಬಗ್ಗೆ ಶಾಸಕ ದಿನೇಶ್ ಗೂಳಿಗೌಡ ಅವರು ಮಾಡಿದ ಮನವಿಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಮಾರಸ್ವಾಮಿಯವರು,ಈ ಬಗ್ಗೆ ಪರಿಶೀಲನೆ ಮಾಡೋಣ. ಸಂಬಂಧಪಟ್ಟ ಕೇಂದ್ರ ಸಚಿವರ ಜತೆ ಖಂಡಿತಾ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಂಡ್ಯ ಜಿಲ್ಲೆ ಅಪ್ಪಟ ಕನ್ನಡತನ, ಅಪ್ಪಟ ಕನ್ನಡಿಗರೇ ಇರುವ ಜಿಲ್ಲೆ. ನಾನು ಕೇಂದ್ರ ಸಚಿವನಾಗಿ ಇಲ್ಲಿಗೆ ಬಂದಿಲ್ಲ, ಅಪ್ಪಟ ಸಾಮಾನ್ಯ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದೇನೆ. ಸಮ್ಮೇಳನದಲ್ಲಿ ಭಾಗಿಯಾಗಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಹೆಚ್ ಡಿ ಕೆ ಹೇಳಿದರು.

ಸಮ್ಮೇಳನ ಸರ್ವಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಸಮ್ಮೇಳನದ ಪ್ರಧಾನ ಭಾಷಣದಲ್ಲಿ ಅನೇಕ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ನಾಡಿಗೆ ಅವರು ಕೊಟ್ಟಿರುವ ಸಂದೇಶಗಳನ್ನು ಜಾರಿಗೆ ತರಬೇಕು, ಅದು ಆಡಳಿತ ನಡೆಸುವವರ ಕರ್ತವ್ಯ,ಅವರ ಆಶಯಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವುದು ನನ್ನ ಬಲವಾದ ಒತ್ತಾಸೆಯಾಗಿದೆ ಎಂದು ಹೇಳಿದರು.

ಸಾಹಿತ್ಯ ಕುರಿತಾದ ತಮ್ಮ ಆಸಕ್ತಿಯನ್ನು ಹಂಚಿಕೊಂಡ ಕುಮಾರಸ್ವಾಮಿ, ದುರ್ಗಾಸ್ತಮಾನ ನಾನು ಬಹು ಇಷ್ಟಪಟ್ಟು ಓದಿದ ಬೃಹತ್ ಕಾದಂಬರಿ,ಅದೇ ರೀತಿ
ವ್ಯಾಸರಾಯ ಬಲ್ಲಾಳರ ಕಾದಂಬರಿಗಳು, ಗಜಾನನ ಶರ್ಮ ಅವರ ಚನ್ನಾಭೈರಾದೇವಿ, ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ, ಬೊಳುವಾರು ಮುಹಮ್ಮದ್ ಕುಂಞಿ ಅವರ ಸ್ವಾತಂತ್ರ್ಯದ ಓಟ ಇತ್ಯಾದಿ ಕಾದಂಬರಿಗಳನ್ನು ಓದಿದ್ದೇನೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗದಿಂದ ಬಂದವನು ನಾನು, ಅಂದಿನ ಚಿತ್ರ ಕಥೆಗಳು ಇಂದಿನ ಚಿತ್ರ ಕಥೆಗಳ ನಡುವೆ ಬಹಳ ವ್ಯತ್ಯಾಸವಿದೆ,ಸಮಾಜವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಬೇಸರವಾಗುತ್ತದೆ. ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಲಿನ ಹೊಳೆಯೋ.. ಜೇನಿನ ಮಳೆಯೋ..’ ಹಾಡನ್ನು ಕೇಳುತ್ತಾ ಅನೇಕ ಸಲ ಮೈಮರೆತಿದ್ದೇನೆ ಎಂದು ಕುಮಾರಸ್ವಾಮಿ ಸ್ಮರಿಸಿದರು.

ಸಂಸ್ಕೃತಿ, ಬಾಂಧವ್ಯ, ಸಂಬಂಧಗಳು ಮರುಕಳಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಮ್ಮೇಳನ ಸರ್ವಾಧ್ಯಕ್ಷರಾದ ಗೊರುಚ ಅವರು ಶತಾಯುಷಿ ಆಗಬೇಕು ಎನ್ನುವುದು ನನ್ನ ಹಾರೈಕೆ. ಅವರಿಗೆ ಜ್ಯೋತಿಷಿ ಹೇಳಿರುವ ಭವಿಷ್ಯ ನಿಜವಾಗಲಿ. ಅವರು ಶತಾಯುಷ್ಯ ಮೀರಿ ನಮ್ಮ ಜತೆಯಲ್ಲಿ ಬಾಳಲಿ ಎಂದು ಇದೇ ವೇಳೆ ಕುಮಾರಸ್ವಾಮಿ ಹಾರೈಸಿದರು.