ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಅನ್ಯಾಯಗಳ ವಿರುದ್ಧ ಹೋರಾಟ:ಅಶೋಕ್

Spread the love

ಬೆಂಗಳೂರು: ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಅನ್ಯಾಯಗಳ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಎಲ್ಲ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಈ ಬಾರಿ ಎರಡು ವಾರ ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ಇನ್ನೂ ಹೆಚ್ಚು ದಿನ ಅಧಿವೇಶನ ನಡೆಸಲು ಒತ್ತಾಯಿಸುತ್ತೇವೆ. ವಕ್ಫ್‌ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆ ಜ್ವಲಂತ ಸಮಸ್ಯೆಯಾಗಿದೆ. ಬಡವರ ರೇಷನ್‌ ಕಾರ್ಡ್‌ ರದ್ದು ಮಾಡಿ ಗ್ಯಾರಂಟಿಗಾಗಿ ಹಣ ಉಳಿಸಲಾಗುತ್ತಿದೆ. ಈ ಸಮಸ್ಯೆ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡುತಗತೇವೆ, ಅಬಕಾರಿ ಇಲಾಖೆಯ ಹಗರಣ, ಬೆಳೆನಾಶಕ್ಕೆ ಪರಿಹಾರ ಮೊದಲಾದ ಸಮಸ್ಯೆಯ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆ ಬಗ್ಗೆ ಚರ್ಚಿಸಲು ನಾನು ಸಭೆ ನಡೆಸಲಿದ್ದೇನೆ. ಈ ಹಿಂದೆ ಕಲ್ಯಾಣ ಕರ್ನಾಟಕ ಕುರಿತು ಸರ್ಕಾರದಿಂದ ಸಭೆ ನಡೆದಿದೆ. ಆ ಬಳಿಕ ಯಾವುದೇ ಸುದ್ದಿ ಇಲ್ಲ. ಬ್ರ್ಯಾಂಡ್‌ ಬೆಂಗಳೂರು ಎಂದು ಹೇಳಿ, ಮಳೆ ಬಂದು ಮುಳುಗುವ ಬೆಂಗಳೂರು ಸೃಷ್ಟಿಯಾಗಿದೆ. ಮಳೆಯಿಂದಾಗಿ ರಸ್ತೆ ಗುಂಡಿ ಉಂಟಾಗಿ ವಾಹನ ಚಾಲಕರಿಗೆ ಬೆನ್ನು ನೋವು ಉಂಟಾಗಿದೆ. ಜಯನಗರ ಶಾಸಕರು ಸೇರಿದಂತೆ ಅನೇಕ ಶಾಸಕರಿಗೆ ಅನುದಾನ ಕಡಿತವಾಗಿದೆ. ಹೀಗೆ ಮೊದಲಾದ ವಿಷಯಗಳ ಬಗ್ಗೆ ಪ್ರಶ್ನಿಸಲಾಗುವುದು ಎಂದು ಅಶೋಕ ತಿಳಿಸಿದರು.