ಬೆಳಗಾವಿ: ರಾಯಭಾಗ ತಾಲೂಕಿನ ಇಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಸೇವೆಯಿಂದ ಅಮಾನತು ಮಾಡಿರುವ ಕ್ರಮ ಸರಿಯಲ್ಲ ಆಮ್ ಆದ್ಮಿ ಪಕ್ಷ ಹೇಳಿದೆ.
ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಆದೇಶವನ್ನು ಹಿಂದೆ ಪಡೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
ಸೀತಾರಾಮ್ ಗುಂಡಪ್ಪ ನೇತೃತ್ವದ ನಿಯೋಗ ಇಂದು ಬೆಳಗಾವಿ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಶಿಕ್ಷಕ ವೀರಣ್ಣ ಮಡಿವಾಳರ ಸೇವಾ ಅಮಾನತು ವಾಪಸು ಪಡೆಯಬೇಕೆಂದು ಒತ್ತಾಯಿಸಿತು.
ವೀರಣ್ಣ ಮಡಿವಾಳರು ಕಳೆದ ಏಳು ವರ್ಷಗಳಿಂದ ಆ ಶಾಲೆಯ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೂಲಭೂತ ಸೌಕರ್ಯಗಳಿಗೆ ಇಲಾಖೆಯೊಂದಿಗೆ ವ್ಯವಹರಿಸುತ್ತಲೆ ಹೋರಾಟ ನಡೆಸುತ್ತಿದ್ದಾರೆ. 7 ವರ್ಷಗಳಿಂದ ಯಾವುದೇ ಕ್ರಮವು ಆಗದ ಕಾರಣ ಮೌನ ಪ್ರತಿಭಟನೆಯನ್ನು ಮಾಡಿರುವುದು ಯಾವುದೇ ಕಾರಣಕ್ಕೂ ತಪ್ಪಲ್ಲ. ಶಿಕ್ಷಾಧಿಕಾರಿಗಳ ಈ ಆದೇಶ ಯಾವುದೇ ನಾಗರೀಕ ಸಮಾಜ ಒಪ್ಪುವಂತದ್ದಲ್ಲ ಎಂದು ಈ ವೇಳೆ ಸೀತಾರಾಮ್ ಗುಂಡಪ್ಪ ಹೇಳಿದರು.
ಮಕ್ಕಳ ಶಿಕ್ಷಣ ದೇಶದ ಭದ್ರ ಭವಿಷ್ಯಕ್ಕೆ ಬುನಾದಿಯಾಗುವ ಆಕಾಂಕ್ಷೆಯಿಂದ ಈ ಮೌನ ಪ್ರತಿಭಟನೆ ನಡೆದಿದೆಯೇ ಹೊರತು ಯಾವುದೇ ವಯಕ್ತಿಕ ಉದ್ದೇಶದಿಂದಲ್ಲ.
ಕೂಡಲೇ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆಯದಿದ್ದಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯಾದ್ಯಂತ ಹೋರಾಟವನ್ನು ನಡೆಸಲಿದೆ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.
ಪಕ್ಷದ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಅರ್ಜುನ್ ಹಲಗಿ ಗೌಡರ, ಬೆಳಗಾವಿ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶಂಕರ ಹೆಗಡೆ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.