ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಾದ ಕಾರಣ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಬೆಳಗಾವಿ – ಗೋವಾ ಸಂಪರ್ಕದ ಹೆದ್ದಾರಿ ಬಂದ್ ಆಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಲಪ್ರಭಾ ನದಿ ಉಗಮವಾಗುತ್ತದೆ. ಕುಸಮಳಿ ಗ್ರಾಮದ ಬಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದ್ದು,ಕಾಮಗಾರಿ ಪ್ರಗತಿಯಲ್ಲಿರುವುದರಿಂದ
ತಾತ್ಕಾಲಿಕವಾಗಿ ರಸ್ತೆಯನ್ನು ನಿರ್ಮಿಸಲಾಗಿತ್ತು.
ಆದರೆ, ಏಕಾಏಕಿ ನೀರಿನ ಹರಿವು ಹೆಚ್ಚಳವಾದುದರಿಂದ ಆ ರಸ್ತೆ ಕೊಚ್ಚಿಕೊಂಡು ಹೋಗಿದೆ.
ಬೆಳಗಾವಿಯಿಂದ ಜಾಂಬೋಟಿ, ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ.

ಹಾಗಾಗಿ ಸಮೀಪದಲ್ಲೇ ಮಣ್ಣಿನ ರಸ್ತೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ, ನೀರಿನ ಹರಿವು ಹೆಚ್ಚಾಗಿ ಈ ರಸ್ತೆಯು ಕೊಚ್ಚಿ ಹೋಗಿದೆ. ಹಾಗಾಗಿ, ಈ ರಸ್ತೆ ಸಂಚಾರ ಬಂದ್ ಆಗಿದೆ.

ಮಳೆಗಾಲ ಮುಗಿಯುವವರೆಗೂ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.ರಸ್ತೆ ಬಂದ್ ಆಗಿರುವುದರಿಂದ
ಬೆಳಗಾವಿಯಿಂದ ಖಾನಾಪುರ, ರಾಮನಗರ ಮಾರ್ಗವಾಗಿ ಗೋವಾಕ್ಕೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಸೇತುವೆ ಬಿಟ್ಟುಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.