ಬೆಳಗಾವಿ: ಬೆಳಗಾವಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 2.73 ಕೋಟಿ ಹಣ ವಶಕ್ಕೆ ಪಡೆದಿದ್ದಾರೆ.
ಮಹಾರಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿಗೆ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಒಟ್ಟು 2.73 ಕೋಟಿ ಹಣ ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯ ಸಚಿನ್ ಮೇನಕುದಳೆ ಹಾಗೂ ಮಹಾರಾಷ್ಟ್ರದ ಮಾರುತಿ ಮಾರಗುಡೆ ಬಂಧಿತ ಆರೋಪಿಗಳು.
ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ವರ್ ಕುಂಬಾರ ಹಾಗೂ ತಂಡ ಸಾಂಗ್ಲಿಯಿಂದ ಹುಬ್ಬಳ್ಳಿಕಡೆಗೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದರು,ಆಗ ದಾಖಲೆಗಳಿಲ್ಲದೇ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಾಗಿಸುತ್ತಿದ್ದುದು ಕಂಡುಬಂದಿದೆ.
ತಕ್ಷಣ ವಾಹನದಲ್ಲಿದ್ದ ಇಬ್ಬರನ್ನು ಬಂಧಿಸಿ 2.73 ಕೋಟಿ ರೂಪಾಯಿಗಳನ್ನು ವಾಹನ ಸಹಿತ ವಶಕ್ಕೆ ಪಡೆದರು.
ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.