ಮೈಸೂರು: ಮೈಸೂರಿನ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದ ವಾಮನ್ ಜಿ ಅವರು ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ನಿನ್ನೆ ಅವರು ಮೈಸೂರಿನಲ್ಲಿ ನಿಧನ ಹೊಂದಿದರು. ಅವರ ಒಡನಾಟದಲ್ಲಿದ್ದ ಕೆಲವರು ವಾಮನ್ ಜಿ ಅವರ ಬಗೆಗೆ ಲೇಖನ ಬರೆಯುವ ಮೂಲಕ ಅವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.ಅವು ಕೆಳಗಿನಂತಿವೆ.
ಈ ಭೂಮಿಯಲ್ಲಿ ಬಹಳ ಕಡಿಮೆ ಜನರು ಸೇವೆಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸುತ್ತಾರೆ. ಅಂತಹ ಒಬ್ಬ ವ್ಯಕ್ತಿ ಶ್ರೀ ವಾಮನ್ ಜಿ ಮೈಸೂರಿನ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದರು.
ಯಾವುದೇ ಅಹಂಕಾರ, ಶತ್ರುಗಳು ಅಥವಾ ಮಹದಾಸೆಗಳಿಲ್ಲದ ಅಪರೂಪದ ವ್ಯಕ್ತಿ, ತುಂಬಾ ಸರಳ ಹಾಗೂ ಸಾಮಾನ್ಯಫ ವ್ಯಕ್ತಿ. ತುಂಬಾ ಸರಳವಾದ ಉಡುಗೆ ತೊಟ್ಟವರು. ಆದರೆ ಅವರ ಕೆಲಸ ಅಸಾಧಾರಣವಾಗಿತ್ತು.

ನಾನು ಅಭ್ಯುದಯದ ಸ್ವಯಂಸೇವಕನಾಗಿ ಗಮನಿಸಿದ ಮತ್ತು ತೊಡಗಿಸಿಕೊಂಡ ಅವರ ಕೆಲವು ಕೆಲಸಗಳನ್ನು ಕೆಳಗೆ ನೀಡಲಾಗಿದೆ. ಹಲವಾರು ಬಡವರು ಅವರ ಕೆಲಸದಿಂದ ಪ್ರಯೋಜನ ಪಡೆದಿದ್ದಾರೆ.ವಾಮನ್ ಜಿ ಅನೇಕ ಬಡ ಜನರಿಗೆ ಕೊನೆಯ ಆಶಾಕಿರಣವಾಗಿದ್ದರು.
ಒಂದು ದಿನ ನಾವು ಅವರೊಂದಿಗೆ ನಾಗರಹೊಳೆಯ ದೂರದ ಕಾಡಂಚಿನ ಹಳ್ಳಿಗೆ ಹೋದೆವು, ಅಲ್ಲಿ ಅವರು ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ಮತ್ತು ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡುವಂತೆ ಕೇಳಿಕೊಂಡರು.

ಅಂಗವಿಕಲ ವ್ಯಕ್ತಿಯೊಬ್ಬರು ತಮ್ಮ ಜೀವನೋಪಾಯವನ್ನು ನೋಡಿಕೊಳ್ಳಲು ಸಹಾಯ ಮಾಡಲು ಸಂಪನ್ಮೂಲಗಳನ್ನು ವಾಮನ್ ಜಿ ಸಂಗ್ರಹಿಸಿದರು ಹಾಗೂ ಅವರು ಹಲವಾರು ಸಂಸ್ಥೆಗಳ ಸಹಾಯದಿಂದ ಆವಿಕಲ ಚೇತನ ವ್ಯಕ್ತಿಗೆ ಮಾರ್ಪಡಿಸಿದ ಮೋಟಾರ್ ಸೈಕಲ್ ಕೊಟ್ಟರು.

ಕೋವಿಡ್ ಸಮಯದಲ್ಲೂ ಅವರು ಅನೇಕ ನಿರ್ಗತಿಕರನ್ನು ಭೇಟಿ ಮಾಡಿ ಸಹಾಯ ಮಾಡುತ್ತಿದ್ದರು.ಆ ಸಮಯದಲ್ಲಿ ಪತಿಯನ್ನು ಕಳೆದುಕೊಂಡ ಒಬ್ಬ ಮಹಿಳೆಗೆ ಹಲವಾರು ತಿಂಗಳುಗಳ ಕಾಲ ಆರ್ಥಿಕ ಸಹಾಯ ಮಾಡಿದರು ಜತೆಗೆ ಅವರ ಮಕ್ಕಳಿಗೆ ಶಾಲೆಯಲ್ಲಿ ಉಚಿತ ಪ್ರವೇಶವನ್ನು ಕೊಡಿಸುವ ಮೂಲಕ ನೆರವಾದರು.

ಕಠಿಣ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ತಾಯಿ ಮತ್ತು ಮಗನಿಗೆ ಅವರು ಸಹಾಯ ಮಾಡಿದರು. ಅಧ್ಯಯನವನ್ನು ನಿಲ್ಲಿಸಿದ ಅನೇಕ ಬಡವರು ಅವರ ಮನ ವೊಲಿಕೆಯಿಂದಾಗಿ ಶಾಲೆಗೆ ಹಿಂತಿರುಗಿದರು.
ಬದುಕಲು ಕಷ್ಟಪಡುತ್ತಿದ್ದ ಅನೇಕ ಬಡ ಮಹಿಳೆಯರನ್ನು ವಾಮನ್ ಅವರು ಗುರುತಿಸಿ ಅವರಿಗೆ ಟೈಲರಿಂಗ್ ಯಂತ್ರವನ್ನು ಪಡೆಯಲು ಸಹಾಯ ಮಾಡಿದರು,ಅಲ್ಲದೆ
ಆ ಮಹಿಳೆಯರನ್ನು ಭೇಟಿ ಮಾಡಿ ಅವರು ಇನ್ನೂ ಕಷ್ಟಪಡುತ್ತಿದ್ದಾರೆಯೇ ಅಥವಾ ಸುಧಾರಿಸುತ್ತಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದರು, ಅವರು ಅನೇಕರಿಗೆ ತಂದೆಯಂತೆ ಇದ್ದರು.

ಅವರು ನಿಯಮಿತವಾಗಿ ಕಿರಿಯ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ವಯಸ್ಸಿನಲ್ಲಿ ತನಗಿಂತ ಚಿಕ್ಕವರಾದ ಸಂಘದ ಅಧಿಕಾರಿಗಳನ್ನು ಅಪಾರ ಗೌರವದಿಂದ ಕಾಣುತ್ತಿದ್ದರು.
ದೇವರು ಅವರಿಗಾಗಿ ಏನಾದರೂ ದೊಡ್ಡ ಯೋಜನೆಯನ್ನು ಹೊಂದಿರಬಹುದು ಆದ್ದರಿಂದ ಅವನು ಅವರನ್ನು ಮುಂದಿನ ಜನ್ಮಕ್ಕೆ ಕರೆದೊಯ್ದಿದ್ದಾನೆ.
ನಾನು ಸೇರಿ ಅಭ್ಯುದಯ ಮೈಸೂರು ತಂಡ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಆದರೆ ಅವರಿಂದ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ಅವರ ಕಾರ್ಯಶೈಲಿ ನಮ್ಮೊಂದಿಗೆ ಸದಾ ಇರುತ್ತದೆ. ಸಮಾಜಕ್ಕೆ ಸೇವೆ, ಇತರ ಸ್ವಯಂಸೇವಕರಿಗೆ ಗೌರವ, ಬಡವರ ಬಗ್ಗೆ ಕಾಳಜಿ ಮತ್ತು ಯಾವಾಗಲೂ ನಗುತ್ತಿರುವ ವಾಮನ ಜಿ ಅವರನ್ನು ನಾವೆಲ್ಲ ಅನುಸರಿಸಬೇಕು.
ಮತ್ತೆ ಹೊಟ್ಟಿ ಬನ್ನಿ ವಾಮನ್ ಜೀ…

ಮತ್ತೊಂದು ಲೇಖನ:
ವಾಮನ್. ಮೈಸೂರಿನಲ್ಲಿ ಕೆಲವರಿಗೆ ಅವರು ವಾಮನ್, ಹಲವರಿಗೆ ವಾಮನ್ ಜೀ, ಒಂದು ಪೀಳಿಗೆಯವರಿಗೆ ವಾಮ್ನಾ ಮಾಮಾ….
ನಾನು ಅವರನ್ನು ಮೊದಲ ಬಾರಿ ಅದ್ಯಾವಾಗ ನೋಡಿದೆನೋ ನೆನಪಿಲ್ಲ. ನನ್ನನ್ನು ‘ಲೋ’ ಎನ್ನುತ್ತಿದ್ದ ವಾಮನ್, ನಾನು ಪ್ರಚಾರಕನಾದ ನಂತರ ಏನಯ್ಯಾ ಅನ್ನುವಷ್ಟು ಬದಲಾದರು.
ಅವರ ನಿರ್ಗಮನದಿಂದ ಮೈಸೂರಿನ ಸಂಘದ ಒಂದು ಅಧ್ಯಾಯ ಮುಗಿಯಿತು.
ಬಹಳ ದೀರ್ಘ ಅಧ್ಯಾಯವಿದು. ನಾಲ್ಕು ದಶಕಗಳಿಗೂ ಮಿಕ್ಕ ವಾಮನ್ ಅವರ ಮೈಸೂರಿನ ಸಂಘ ಜೀವನದಲ್ಲಿ ಸದಾ ಸಕ್ರಿಯ. ಅಂದರೆ ಬರಿಯ ಸಕ್ರಿಯತೆಯಲ್ಲ. ಪುಟಿಯುವ ವ್ಯಕ್ತಿತ್ವ. ವಾಮನ್ ಅವರು ಇದ್ದದ್ದೇ ಹಾಗೆ. ಅವರನ್ನು ಮಂದಗತಿಯಲ್ಲಿ, ಸಪ್ಪೆಯಾಗಿ, ಹತಾಶರಾಗಿ ಇದ್ದದ್ದನ್ನು ಯಾರೂ ನೊಡಿರಲಿಕ್ಕಿಲ್ಲ. ಪರಿಸ್ಥಿತಿ ಅದೆಷ್ಟೇ ಕಷ್ಟವಿದ್ದರೂ ವಾಮನ್ ರ ಉತ್ಸಾಹ ಮತ್ತು ಚಟುವಟಿಕೆಗಳನ್ನು ಅವು ಪ್ರಭಾವಿಸುತ್ತಿರಲಿಲ್ಲ. ಮೈಸೂರಿನ ವೇಗವನ್ನು ಬಲ್ಲವರು ವಾಮನ್ ರನ್ನು ನೋಡಿದರೆ ಇವರು ಅಸಲಿಗೆ ಮೈಸೂರಿನವರೋ?! ಎಂದು ಅನುಮಾನಿಸುವಷ್ಟು ಚುರುಕು.

ವಾಮನ್ ರು ಕೆಲಕಾಲ ಶಿವಮೊಗ್ಗದಲ್ಲಿ ಇದ್ದರು. ಅಲ್ಲಿ ಅವರು ಬಸವೇಶ್ವರ ಶಾಖೆಗೆ ಹೋಗುತ್ತಿದ್ದರು. ಸಂಘದ ಬಾಲಪಾಠಗಳನ್ನು, ಪದ್ಧತಿಗಳನ್ನು ಅಲ್ಲೇ ಕಲಿತರು. ಅದನ್ನವರು ಯಾವಾಗಲೂ ನೆನಪು ಮಾಡಿಕೊಳ್ಳುತ್ತಿದ್ದರು. ಮೂಲವನ್ನು ಮರೆಯಲಿಲ್ಲ. ಕೆಲವು ವರ್ಷಗಳ ಕಾಲ ಪ್ರಚಾರಕರಾಗಿಯೂ ಇದ್ದರು. ಪ್ರಚಾರಕ ಜೀವನಕ್ಕೆ ವಿದಾಯ ಹೇಳಿದ ನಂತರ ಮೈಸೂರಿನಲ್ಲಿಯೇ ಇದ್ದುಬಿಟ್ಟರು. ಅತಿ ದೀರ್ಘಕಾಲ ಅವರು ಮೈಸೂರು ನಗರ ಕಾರ್ಯಕಾರಿಣಿ ಸದಸ್ಯರಾಗಿದ್ದರು.

ಅವರಿಗೆ ಮೈಸೂರಿನ ಓಣಿ, ಕೇರಿ, ಗಲ್ಲಿ, ಮುಖ್ಯರಸ್ತೆ ಎಲ್ಲವೂ ತಮ್ಮ ಮನೆಯಷ್ಟೇ ಪರಿಚಯ. ಆದರೆ ಅವರ ವಿಶೇಷ ಗಮನವಿದ್ದದ್ದು ತಿಲಕ್ ನಗರದ ಬಗ್ಗೆ.
ರಾಜೇಂದ್ರ ನಗರಕ್ಕೂ ಸಮಾನ ಗಮನ ಕೊಟ್ಟವರು. ಸಾಂಘಿಕ ಎಂದರೆ ಶಾಖೆಗಳಿಗೆ ಮಾದರಿಯಾಗಿರಬೇಕು ಎನ್ನುತ್ತ ತಿಲಕ್ ನಗರದ ಸಾಂಘಿಕ್ ನ್ನು ಪೂರ್ತಿಯಾಗಿ ಹೆಗಲಮೇಲೆಳೆದುಕೊಂಡು ಅದನ್ನು ಪ್ರತಿ ವಾರ ಯಶಸ್ವಿಗೊಳಿಸುತ್ತಿದ್ದರು. ನಗರದ ಶಾರೀರಿಕ ವರ್ಗದಲ್ಲಿ ಪೂರ್ಣವಾಗಿ ಇರುತ್ತಿದ್ದರು.
ವಾಮನ್ ಅವರು ಜೀವನೋಪಾಯಕ್ಕಾಗಿ ಒಂದು ಟೆಂಪೋ ಓಡಿಸುತ್ತಿದ್ದರು. ಅದರಿಂದ ಬಂದ ಗಳಿಕೆಯೆಷ್ಟೋ ಅಷ್ಟೇ. ತಮ್ಮ ಕಷ್ಟಗಳನ್ನು ಹೇಳಿಕೊಂಡವರಲ್ಲ ಅಥವಾ ಕೆಲವೇ ಆತ್ಮೀಯರ ಹತ್ತಿರ ಹೇಳಿಕೊಂಡಿರಬಹುದು. ಮನೆಯಲ್ಲಿ ಮಡದಿ, ಒಬ್ಬ ಮಗ, ಒಬ್ಬಳು ಮಗಳು. ಅವರಿಬ್ಬರೂ ಒಂದು ಘಟ್ಟ ಮುಟ್ಟಿದ ನಂತರವೇ ವಾಮನ್ ನಿರಾಳವಾಗಿದ್ದು. ಅವರು ತಮ್ಮ ವಾಹನದಿಂದ ಇಳಿದು ನಡೆದುಕೊಂಡು ಬರುವಾಗ ನಾನು ಮತ್ತು ರಾಘು (ಮೈಸೂರಿನಲ್ಲಿ ಜಿಲ್ಲಾ ಪ್ರಚಾರಕರಾಗಿದ್ದವರು) ಅವರಿಗೆ ಪರಾಕು ಕೂಗುವಂತೆ The Van, The Man, The Van Man Vaman ಎಂದು ಹಾಸ್ಯಮಾಡುತ್ತಿದ್ದೆವು. ಅವರಿಗೆ ಹಾಸ್ಯ, ಟೀಕೆ ಯಾವುದೂ ತಾಗುತ್ತಿರಲಿಲ್ಲ, ನಿರ್ಲಿಪ್ತ.
ವಾಮನ್ ರನ್ನು ಭೇಟಿ ಮಾಡಲು ಇದ್ದ ಜಾಗವೆಂದರೆ ಮೈಸೂರಿನ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಟೆಂಪೋ ಸ್ಟ್ಯಾಂಡ್. ಸಂತೋಷರು, ರಾಘು (ರಾಘವೇಂದ್ರ), ನಟ (ನಟರಾಜ) ಯಾರ ಜೊತೆಯಲ್ಲೇ ವಾಮನ್ ರನ್ನು ನೋಡಲು ಹೋದರೂ ಉಳಿದವರು ಬರುವ ಮುನ್ನವೇ ವಾಮನ್ ವಾಮನ್ ಎನ್ನುವುದು ರೂಢಿಯಾಗಿತ್ತು.
ವಾಮನ್ ಅವರ ಸಂಘ ಜೀವನವು ಅನುಭವ ಸಮೃದ್ಧವಾದದ್ದು. ಆ ಅನುಭವವು, ಅವರು ಸೂಕ್ಷಗಳನ್ನು ಗುರುತಿಸುವ ರೀತಿಯಲ್ಲಿ ವ್ಯಕ್ತವಾಗುತ್ತಿತ್ತು.
ಒಂದು ವಿಷಯವನ್ನು ಹಲವು ಮಗ್ಗುಲುಗಳಿಂದ ನೋಡುವ, ವಿವೇಚಿಸುವ ಪರಿ, ಎಲ್ಲವನ್ನೂ ಪ್ರಶ್ನಿಸಿ ಸ್ಪಷ್ಟಪಡಿಸಿಕೊಳ್ಳುವ ಅವರ ಸ್ವಭಾವ ಗಮನಾರ್ಹವಾದದ್ದು. ಅವರೊಳಗಿದ್ದ ಒಬ್ಬ ಚಿಂತಕನು ಖಾಸಗಿ ಮಾತುಕತೆಗಳಲ್ಲಿ ಮಾತ್ರವಲ್ಲದೆ ಬೈಠಕ್, ಸಾಂಘಿಕ್ ಮತ್ತು ಇತರ ಸಾಮೂಹಿಕ ಕೂಡುಹದ ಸ್ಥಳಗಳಲ್ಲಿ ಹೊರಬರುತ್ತಿದ್ದ.

ಆ ಕಾಲಕ್ಕೆ ಮೈಸೂರಿನ ಸಾಪ್ತಾಹಿಕ ಮಂಗಳವಾರದ ಬೈಠಕ್ ವಿಶೇಷ. ಪ್ರಾಂತದ ಉಳಿದ ಕಡೆಗಳಲ್ಲಿ ನಡೆಯುವ ಸೋಮವಾರದ ಬೈಠಕ್ ಮೈಸೂರಿನಲ್ಲಿ ಮಾತ್ರ ಮಂಗಳವಾರ ನಡೆಯುತ್ತಿತ್ತು. ಆ ಬೈಠಕ್ ಹಲವು ವಿಷಯಗಳಿಗೆ ಪ್ರಸಿದ್ಧವಾಗಿತ್ತು. ಅದರಲ್ಲಿ ಪ್ರಮುಖವಾದದ್ದೆಂದರೆ – ಬೈಠಕ್ ನ ವಿಷಯ ಇಂತಹ ದಿಕ್ಕಿನಲ್ಲಿ ಸಾಗಬೇಕು, ಹೀಗ್ಹೀಗೆ ನಿರ್ಣಯ ಆದರೆ ಉತ್ತಮ ಎಂದು ಪೂರ್ವಚಿಂತನೆ ಮಾಡಿಕೊಂಡು ಬೈಠಕ್ ತೆಗೆದುಕೊಳ್ಳುವವರು ಬಂದಿದ್ದರೆ ಅವರ ಪೂರ್ವಯೋಜನೆಯು ಬೇರೊಂದು ದಿಕ್ಕಿನಲ್ಲಿ ಸಾಗುವ ಹಾಗೆ ಮಾಡುವ ನಿಪುಣರು ಹಲವರಿದ್ದರು. ಅದರಲ್ಲಿ ವಾಮನ್ ಒಬ್ಬರು.
ಆದರೆ, ಆ ಎಲ್ಲ ಚರ್ಚೆ, ಚಿಂತನೆಗಳು ಕಾರ್ಯಕ್ಕೆ ಹೊಸತೊಂದು ಆಯಾಮ, ನವೀನ ಶಕ್ತಿಯನ್ನು ಕೊಡುತ್ತಿದ್ದುವು. ಹಾಗಾಗಿ, ಬೈಠಕ್ ತೆಗೆದುಕೊಳ್ಳುವವರು ವಿಷಯದ ಪಟ್ಟಿ ಮಾಡಿಕೊಂಡು ಬಂದರಷ್ಟೇ ಸಾಕಾಗುತ್ತಿರಲಿಲ್ಲ. ಆ ವಿಷಯಗಳ ಬಗ್ಗೆ ಬೈಠಕ್ ನಲ್ಲಿ ಬರಬಹುದಾದ ಪ್ರಶ್ನೆಗಳ ಕುರಿತು anticipate ಮಾಡಿಕೊಂಡೇ ಬರಬೇಕಿತ್ತು. ಮೈಸೂರಿನಲ್ಲಿ ಕೆಲಸ ಮಾಡಿದ ಸಾಕಷ್ಟು ಕಾರ್ತಕರ್ತರಿಗೆ ಈ ಬೈಠಕ್ ಗಳ ಸ್ವಾದ ತಿಳಿದಿದೆ. ಕಾ. ಶಂ. ಶ್ರೀಧರ, ಸಾಮರಸ್ಯದ ವಾದಿರಾಜ ಇತ್ಯಾದಿ…
ವಾಮನ್ ರ ವಿಚಾರವಂತಿಕೆಗೆ ಸೂತ್ರವಿತ್ತು. ಮಂಗಳವಾರ ಯಾವುದೇ ಚರ್ಚೆ ನಡೆದು ನಿರ್ಣಯವಾದ ಮರುದಿನ – ‘ಏನನ್ನಿಸಿತು ನಿನ್ನೆಯ ಚರ್ಚೆ’ ಅಂತ ಕೇಳಿದರೆ, ಅವರು ಮೂರು ವಾಕ್ಯಗಳನ್ನು ಯಾವಾಗಲೂ ಹೇಳುವರು. ಅವು ಅವರ ವೈಚಾರಿಕತೆಯ ಪ್ರಾಥಮಿಕ ನಿಲುವುಗಳಾಗಿದ್ದುವು. ಅವೆಂದರೆ –
Sometimes I don’t agree
Sometimes I don’t differ
Sometimes I don’t heed.
ಅವರೊಬ್ಬ ಉತ್ತಮ ಸಂವಹನಕಾರ. ಒಮ್ಮೆ ಮೈಸೂರು ನಗರದ ಸಾಂಘಿಕ್ ಮುಗಿದ ನಂತರ ಕೆಲವು ಸೂಚನೆಗಳನ್ನು ಕೊಡುವುದಿತ್ತು. ವಾಮನ್ ಸೂಚನೆಗಳನ್ನು ಕೊಟ್ಟರು. ಸರಳವಾಗಿ, ಕಡಿಮೆ ಪದಗಳಲ್ಲಿ, ಸಮಗ್ರವಾಗಿ ಸೂಚನೆ ಕೊಟ್ಟರು. ಸ್ವಯಂಸೇವಕರಿಗೆ ಸೂಚನೆಗಳನ್ನು ಹೇಗೆ ಕೊಡಬೇಕು ಎಂಬುದಕ್ಕೆ ಅದೊಂದು ಮಾದರಿ. ವಾಮನ್ ವೇದಿಕೆ ಹತ್ತಿದ್ದು ಮೈಕ್ ಎದುರು ನಿಂತಿದ್ದು ಬಹಳ ಕಡಿಮೆ. ಅಂತಹ ಕಡಿಮೆ ಸಂದರ್ಭಗಳ ಪೈಕಿ ಇದೂ ಒಂದು.
ಸಂಘ ಕಾರ್ಯದ ಕುರಿತು ಅದೆಷ್ಟು ಕಾಳಜಿಯೋ ರಾಜಕೀಯ ಕ್ಷೇತ್ರ ಬೆಳೆಯಬೇಕು ಎಂಬ ಕಕ್ಕುಲತೆ ಅವರಿಗಿತ್ತು. ಹಾಗಾಗಿ ಆ ಕೆಲಸಗಳಲ್ಲಿಯೂ ತೊಡಗುತ್ತಿದ್ದರು. ಅವರ ತೊಡಗುವಿಕೆಯ ಪ್ರಮಾಣಕ್ಕೂ ಅದರಿಂದ ಉಂಟಾದ ಪರಿಣಾಮಕ್ಕೂ ಏನಾದರೂ ತಾಳೆ ಇದೆಯೇ ಎಂದು ಕೇಳಿದರೆ ನಕ್ಕು ಸುಮ್ಮನಾಗುವರು.
ಅವರಿಗೆ ಅಭಿಪ್ರಾಯ ಇರಲಿಲ್ಲವೆಂದಲ್ಲ. ಹಲವು ವಿಷಯಗಳಲ್ಲಿ ಅವರಿಗೆ Informed opinions ಇರುತ್ತಿದ್ದವು. ಕೆಲವು ಅನುಭವ ಜನ್ಯವಾಗಿರುತ್ತಿದ್ದುವು. ಉದಾಹರಣೆಗೆ – ನಮ್ಮ ಮೈಸೂರಿನ ಪ್ರಚಾರಕರು ಈಗಷ್ಟೇ Under 18 team ಕಟ್ಟುತ್ತಿದ್ದಾರೆ. ಹಾಗಾಗಿ ಪ್ರಚಾರಕರು ಮತ್ತು ತಂಡ ಇಬ್ಬರೂ ಒಟ್ಟಿಗೆ ಸ್ನಾತಕರಾಗುವವರೆಗೆ ಕಾಯಬೇಕು ಕಣಯ್ಯಾ ಎನ್ನುತ್ತಿದ್ದರು.
ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಧರ್ಮ ಜಾಗರಣದ ಜವಾಬ್ದಾರಿ ಇತ್ತು. ಹೇಗಿದೆ ವಾಮನ್ ಹೊಸ ಜವಾಬ್ದಾರಿ ಎಂದು ಕೇಳಿದಾಗ – ಇದೇ ಜವಾಬ್ದಾರಿಯನ್ನು, ಈ ಥರದ ಕೆಲಸವನ್ನು 25 ವರ್ಷಗಳ ಮೊದಲೇ ಕೊಡಬೇಕಿತ್ತು ಕಣಯ್ಯಾ ಎಂದರು.

ಮೈಸೂರಿಗೆ ಹೋದಾಗಲೆಲ್ಲಾ ಸಿಗುತ್ತಿದ್ದ ವಾಮನ್ ಕಳೆದ ಕೆಲವು ತಿಂಗಳಿಂದ ಸಿಕ್ಕಿರಲಿಲ್ಲ. ಅವರ ಅನಾರೋಗ್ಯದ ವಿಷಯವನ್ನು ಕೇಳಿ ತಿಳಿದುಕೊಂಡೆ.
ವಾಮನ್ ರದ್ದು ಸರಳ ಸಜ್ಜನಿಕೆಯ ಬದುಕು. ಅವರ ಸ್ವಯಂಸೇವಕತ್ವವು ಒಂದು ಮಾದರಿ. ಸಂಘ ಮತ್ತು ಸಮಾಜವಲ್ಲದೆ ಬೇರಾವುದೂ ಅವರ ಬದುಕಿನಲ್ಲಿ ಇರಲಿಲ್ಲ.
‘ಜೀವನವನ್ನು ಸವೆಸಿದರು’ ಎಂಬ ಮಾತು ವಾಮನ್ ರ ವಿಷಯದಲ್ಲಿ ಅಕ್ಷರಶಃ ನಿಜ.
ಅವರ ಚಿಂತನೆ, ಮಾತು, ನಡವಳಿಕೆಯನ್ನು ನೋಡಿದಾಗ ಕುವೆಂಪು ಅವರ ಕವನದ ಕೆಲವು ಸಾಲುಗಳು ನೆನಪಾಗುತ್ತದೆ. ಈ ಸಾಲುಗಳು ಇವರಿಗಾಗಿಯೋ ಇಂತಹವರಿಗಾಗಿಯೋ ಬರೆದದ್ದು ಅನಿಸುತ್ತದೆ –
ವಸಂತ ವನದಲಿ
ಕೂಗುವ ಕೋಗಿಲೆ
ರಾಜನ ಪದವಿಯ
ಬಯಸುವುದಿಲ್ಲ |
ಹೂವಿನ ಮರದಲಿ
ಜೇನಿನ ಹುಳುಗಳು
ಮೊರೆವುದು ರಾಜನ
ಭಯದಿಂದಲ್ಲ ||
ವಾಮ್ನಾ ಮಾಮನ ಸ್ಮೃತಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏
- ದೀಪು
ಇನ್ನೊಂದು ಲೇಖನ:
ನಮ್ಮ ವಾಮನ್-ಜಿಯ
ದೇಶ ಭಕುತಿ ಎಂದರೆ….
ವಾಮನ್ ಜಿ,
ಮೈಸೂರಿನ ಈ ಸ್ವಯಂಸೇವಕನನ್ನು
ನೋಡಿದಾಗಲೆಲ್ಲಾ ಮೂಡುತ್ತಿದ್ದ ಪ್ರಶ್ನೆಗಳು ಹತ್ತಾರು.
ಯಾರೀ, ಬೆವರಿನ ಮನುಷ್ಯ ?
ಹಳತಾದ ಅಂಗಿ, ಶೇವಿಂಗ್ ರಹಿತ ಕೆನ್ನೆ, ಮುಗ್ಧ ನಗು, ಚಡಪಡಿಕೆಯ ಮುಖ
ಅದೇನೋ ಧಾವಂತ..
ನೋಡಲು ಥೇಟ್ ಬಣ್ಣಿತ ಕಾಮ್ರೇಡ್.
ನಡೆಯಲ್ಲಿ ಮಾತ್ರ ಅದಕ್ಕಿಂತ ಮಿಗಿಲು
ಸೇವೆ ಎಂಬ ಯಜ್ಞ, ದೇಶವೆಂಬ ಭಕುತಿಯೂ ಅವರ ಉಸಿರು.

ಎದುರು ಸಿಕ್ಕಾಗಲೆಲ್ಲಾ ಅವರ
ಮೊದಲ ಕುಶಲೋಪರಿ- “ನಮ್ಮವರು ನಮ್ ಹುಡುಗನಿಗೆ ಮತ್ತೇನಾದ್ರೂ ಮೋಸ ಮಾಡಿದ್ರಾ ?, ಬದಲಿಸೋಣ ನಮ್ಮವರನು…’
ನಮ್ಮ ಹುಡುಗರು ಎಂದರೆ
ಶೋಷಿತರು, ಅಸಹಾಯಕರು
ನಮ್ಮವರು ಅಂದ್ರೆ
ಅವರಂಥ ಶ್ರೇಷ್ಠತಮರು !
ವಾಮನ್ ಜಿಯ ಎರಡನೇ ಮಾತು:
“ನೋಡಪ್ಪಾ, ನಮ್ಮಜ್ಜ ಮಹಾನ್ ಬಲಿತ, ಕೈಯಲ್ಲಿ ಕಾಸು ಕರಿಮಣಿ ಇಲ್ಲದಿದ್ದರೂ
ಹುಸಿ ಶ್ರೇಷ್ಠತೆಗೆ ಬರವಿರಲಿಲ್ಲ.
ಅರಿವಿದ್ದೋ ಇಲ್ಲದೆಯೋ
ನೋಯಿಸುವುದೇ ಆತನ ಹುಟ್ಟುಗುಣವಾಗಿತ್ತು !
ಆದರೆ ಆತ ಒಳ್ಳೆಯವ,
ಬದಲಾಯಿಸೋಣ,
ಅಸಹಾಯಕರನ್ನು ಶಕ್ತರಾಗಿಸೋಣ”
ವ್ಯಾನ್ ಓಡಿಸುತ್ತಲೇ ಬದುಕು ಕಟ್ಟಿಕೊಂಡಿದ್ದ ವಾಮನ್ ಜಿ
ಆ ಕೂಲಿನಾಲಿಯ ಶ್ರಮದಲ್ಲೆ
ಅಸಹಾಯಕರ ನೆರವಿಗೆ ಧಾವಿಸುತ್ತಿದ್ದರು.
ದುಡಿಮೆಯ ಒಂದಿಷ್ಟು ಕೂಲಿಯನು ಸಮಾಜದ ಅಕ್ಷಯಕ್ಕೆ ಮೀಸಲಿಟ್ಟಿದ್ದರು
ನಾಡು, ನುಡಿ, ದೇಶ,ಕೋಶ, ಸೇವೆ, ಸಾಮರಸ್ಯ ಎಂದರೆ
ಮೊದಲಿಗರಾಗಿ ಎದ್ದುನಿಲ್ಲುತ್ತಿದ್ದರೂ
ಅದು ಯಾತಕ್ಕೆ ?
ಬಾವುಟ ಕಟ್ಟಲು, ಭಾಷಣ ಕೇಳಲು,
ಊಟ ಬಡಿಸಲು…
ಸಹಾಯ ಮಾಡಲಷ್ಟೆ !
ವೇದಿಕೆ ಹತ್ತಿ ಭಾಷಣ ಮಾಡಿದ್ದು
ಬೈಠಕ್ ತೆಗೆದುಕೊಂಡಿದ್ದು ಕಡಿಮೆ
ಅವರದೇನಿದ್ದರೂ ಕಾರ್ನರ್ ಮಾತು
ಅಸಹಾಯಕರಿಗೆ ಮಾತು ಬರಲಿ, ವೇದಿಕೆ ಅವರಿಗೆ ಮೀಸಲಿರಲಿ ಎನ್ನುತ್ತಿದ್ದರು.

ಮನೆಯಲ್ಲಿ ಅಜ್ಜ ಕಾಯಿಲೆಯಿಂದ ಮಲಗಿದ್ದರೂ ಮೊದಲ ಮಾತು ಲೋಕದ್ದೇ, ಬಳಿಕ ಅಜ್ಜನ ವಿಚಾರ !
ಅದೊಮ್ಮೆ ಅವರೆಂದರು-
“ಆಸ್ಪತ್ರೆಯಲ್ಲಿರುವ ನಮ್ಮಜ್ಜನಿಗೆ
ದಲಿತರಿಂದಲೇ ರಕ್ತ ಕೊಡಿಸಿದೆ, ಅವರ ಮನೆಯ ಗಂಜಿ ಕುಡಿಸಿದೆ
ಈಗ ಆತ ಬದಲಾದ,”
ನಿಜ ಹೇಳುವೆ ಅವರೊಬ್ಬ
ಮೀಸಲುವಾದಿ,
ರಾಷ್ಟ್ರೀಯ ಸಮಾಜವಾದಿ,
ಸಾಮರಸ್ಯ ಸಹಾಯವಾದಿ
ಇಂತಿರ್ಪ ಸ್ವಯಂಸೇವಕ
ಲೋಕದ ಸೇವೆ ನಿಲ್ಲಿಸಿ
ಹೊರಟೇ ಬಿಟ್ಟರು
ಹೋಗಿ ಬನ್ನಿ ವಾಮನ್ ಜಿ…
ನೀವು ಹೇಳಿಕೊಡುತ್ತಿದ್ದ
ಸಂಘದ ಗೀತೆ ನೆನಪಾಗುತ್ತಿದೆ
‘ದೀನ ದಲಿತ ಸೇವೆಯೇ
ಪರಮ ಆರಾಧನೆ, ಸಾಕು ಬರಿಯ ಬೋಧನೆ, ಬೇಕು ಹಿರಿಯ ಸಾಧನೆ
ದಿಟದಿ ನಾವು ಅಳಿಸಬೇಕು
ನುಡಿಯ ನಡೆಯ ಅಂತರ
ರಚಿಸಬೇಕು ನವ ಸಮಾಜ
ಸರ್ವಾಂಗ ಸುಂದರ!”
ಈ ಗೀತೆಯಲ್ಲಿ, ಅದರ ಆಶಯದಲ್ಲಿ
ನೀವಿರುತ್ತೀರಿ, ನಾವು ಹಾಡುತಿರುತ್ತೇವೆ
ಸಮಾಜ ಬದಲಾಗುವವರೆಗೆ !
-ಒಬ್ಬ ಸ್ವಯಂಸೇವಕ
(ವಾಮನ್ ಜಿ ಪ್ರಚಾರ ಬಯಸುತ್ತಿರಲಿಲ್ಲ. ಹಾಗಾಗಿ ಬರೆದವರ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ)