ಬೆಂಗಳೂರು: ಪೌರಕಾರ್ಮಿಕರು, ಆಟೋ ಟಿಪ್ಪರ್,ಕಾಂಪ್ಯಾಕ್ಟರ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಅವರು,
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಹೆಸರಿನಲ್ಲಿ ಪ್ರತಿ ವಾರ್ಡ್ ಗಳಲ್ಲಿ ನಿಗದಿಯಾಗಿರುವ ಸಂಖ್ಯೆಯಲ್ಲಿ ಪೌರಕಾರ್ಮಿಕರು, ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಗುತ್ತಿಗೆದಾರರು ಇವುಗಳ ಹೆಸರಿನಲ್ಲಿ ನಡೆಸುತ್ತಿರುವ ಕೋಟ್ಯಾಂತರ ಬಿಲ್ ಲೂಟಿಯನ್ನು ತಡೆಗಟ್ಟಿದಲ್ಲಿ ಮಾತ್ರ ಬೆಂಗಳೂರು ನಗರವನ್ನು ಕಸಮುಕ್ತವನ್ನಾಗಿಸಬಹುದು ಎಂದು ಹೇಳಿದರು.
ಮುಖ್ಯ ಆಯುಕ್ತರು ಪ್ರತಿ ವಾರ್ಡ್ ಗಳಲ್ಲಿ ಇವುಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಅನವಶ್ಯಕವಾಗಿ ತೆರಿಗೆದಾರರ ಹಣ ಅಕ್ರಮವಾಗಿ ನಗರದ ಶಾಸಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರುಗಳ ಜೇಬಿಗೆ ಸೇರುತ್ತಿದೆ. ಅದನ್ನು ಬಿಟ್ಟು ಹೆಚ್ಚುವರಿ ಯಾಗಿ ಮತ್ತಷ್ಟು ವಾಹನಗಳನ್ನು ಪಡೆದುಕೊಂಡಲ್ಲಿ ಮತ್ತಷ್ಟು ಲೂಟಿ ಹೆಚ್ಚಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಆಯುಕ್ತರು ತಮ್ಮ ವಿಚಕ್ಷಣ ದಳವನ್ನು ಉಪಯೋಗಿಸಿಕೊಂಡು ಇವುಗಳ ಬಗ್ಗೆ ರಹಸ್ಯ ತನಿಖೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡಲ್ಲಿ ತೆರಿಗೆದಾರರ ನೂರಾರು ಕೋಟಿ ಹಣ ಲೂಟಿ ಆಗುವುದು ನಿಲ್ಲುತ್ತದೆ. ಬೆಂಗಳೂರು ಕಸಮುಕ್ತವಾಗುತ್ತದೆ. ಪ್ರತಿ ದಿವಸ ಪೌರಕಾರ್ಮಿಕರು ಹಾಗೂ ವಾಹನಗಳ ಹಾಜರಾತಿಯನ್ನು ಖಾತ್ರಿಪಡಿಸಿಕೊಳ್ಳಲು ಸ್ಥಳೀಯ ನಾಗರಿಕರ ಸಮಿತಿಯನ್ನು ರಚಿಸಿ ಇವುಗಳಿಗೆ ದೆಹಲಿ ರಾಜ್ಯದ ಮಾದರಿಯಲ್ಲಿ ಸಾಂವಿಧಾನಿಕ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.
ಅದನ್ನು ಬಿಟ್ಟು ಒಂದೆರಡು ಕಿಲೋಮೀಟರ್ ಪಾದಯಾತ್ರೆ ನಡೆಸುವುದು ಕೇವಲ ಪ್ರದರ್ಶನ ಹಾಗೂ ಜನತೆಯ ಕಣ್ಣೊರೆಸುವ ತಂತ್ರವೇ ಹೊರತು ಬೇರೇನೂ ಅಲ್ಲ. ಇಂತಹ ಕ್ರಮಗಳ ಮೂಲಕ ನಗರದಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟಿರುವ ಕಸದ ಮಾಫಿಯಾವನ್ನು ತಡೆಗಟ್ಟದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು ನಗರವನ್ನು ಕಸಮುಕ್ತ ಮಾಡಲು ಸಾಧ್ಯವಿಲ್ಲ. ಬೇಕಾಬಿಟ್ಟಿಯಾಗಿ ಜನತೆಯ ಹಣ ಅನ್ಯರ ಪಾಲಾಗುತ್ತಿರುವುದನ್ನು ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ.ಸದಂ ಆಗ್ರಹಿಸಿದರು.