ಬಿಬಿಎಂಪಿ ಕಚೇರಿಗಳು ಖಾಲಿ;ಸಾರ್ವಜನಿಕ ರಿಗೆ‌ ತೊಂದರೆ-ಆಪ್‌ ಆಕ್ರೋಶ

Spread the love

ಬೆಂಗಳೂರು: ಸಮೀಕ್ಷೆಯ ನೆಪದಲ್ಲಿ ಎಲ್ಲಾ ಸಿಬ್ಬಂದಿ ಹೊರಗೆ ಹೋಗುತ್ತಿದ್ದು ಬಿಬಿಎಂಪಿ ಕಚೇರಿಗಳು ಖಾಲಿಯಾಗಿ ಸಾರ್ವಜನಿಕ ಕೆಲಸಗಳು ಸಂಪೂರ್ಣ ಅಸ್ತವ್ಯಸ್ತವಾಗಿವೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ಕಳೆದ 15 ದಿನಗಳಿಂದ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆ ನೆಪದಲ್ಲಿ ಬೆಂಗಳೂರಿನ ಎಲ್ಲಾ ನಗರ ಪಾಲಿಕೆ ಕಚೇರಿಗಳಿಗೆ ಸಿಬ್ಬಂದಿಗಳು ಕೆಲಸಕ್ಕೆ ಬರುತ್ತಿಲ್ಲ,ಹಾಗಾಗಿ ಕಚೇರಿಗಳು ಸಂಪೂರ್ಣ ಬಣಗುಡುತ್ತಿವೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವಂತಾಗಿದೆ ಕೂಡಲೇ ಮುಖ್ಯ ಆಯುಕ್ತರು ಇತ್ತ ಗಮನಹರಿಸಿ ಸಾರ್ವಜನಿಕ ಕೆಲಸಗಳು ಮುಂದುವರಿಯುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಗರಪಾಲಿಕೆ ಕಚೇರಿಯಲ್ಲಿ ಪಕ್ಷದ ಮುಖಂಡ ಅಣ್ಣ ನಾಯಕ್ ಫ್ಯಾಕ್ಟ್ ಚೆಕ್ ಮಾಡಿ ವಿಡಿಯೋ ಕೂಡಾ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಮೀಕ್ಷೆಗಾಗಿ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಸರ್ಕಾರ ನೇಮಿಸಿದೆ,ಆದರೆ ಬಿಬಿಎಂಪಿ ಸಿಬ್ಬಂದಿ ಕಳೆದ ಹಲವು ದಿನಗಳಿಂದ ಕಚೇರಿಗೆ ಬಾರದೆ ಗೈರು ಹಾಜರಾಗಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ಅಣ್ಣ ನಾಯಕ್ ದೂರಿದ್ದಾರೆ.

ಕೂಡಲೇ ಜಿಬಿಎ ಮುಖ್ಯ ಆಯುಕ್ತರು ಹಾಗೂ ನಗರ ಪಾಲಿಕೆ ಆಯುಕ್ತರು ತಮ್ಮ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಕಚೇರಿಗಳಿಗೆ ಹಾಜರಾಗುವಂತೆ ಸೂಚಿಸಬೇಕು, ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.