ಬೆಂಗಳೂರು: ಬೆಂಗಳೂರಿನಲ್ಲಿ ಮರಗಳು ಬಿದ್ದು ಸಾವು,ನೋವು ಉಂಟಾಗುವುದು ಹೆಚ್ಚುತ್ತಲೇ ಇದ್ದು,ಇದಕ್ಕೆ ಬಿಬಿಎಂಪಿ ಅರಣ್ಯಾಧಿಕಾರಿಗಳೆ ಹೊಣೆ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
ಮರ ಬಿದ್ದು ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಂಡು ಒಣಗಿದ ಹಾಗೂ ಶಿಥಿಲವಾದ ಮರಗಳನ್ನು ಕತ್ತರಿಸಬೇಕಿತ್ತು.ಹಾಗೆ ಮಾಡದೆ ಜನರ ಪ್ರಾಣದ ಜತೆ ಚೆಲ್ಲಾಟವಾಡುವ ಅರಣ್ಯಾಧಿಕಾರಿಗಳನ್ನು ತಕ್ಷಣ ಅಮಾನತು ಪಡಿಸಬೇಕೆಂದು ಆಪ್ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಒತ್ತಾಯಿಸಿದರು.
ನಿನ್ನೆ ಬೆಂಗಳೂರಿನ ಶ್ರೀನಗರದಲ್ಲಿ ಮರದ ಕೊಂಬೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿರುವ ಯುವಕ ಅಕ್ಷಯ್ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ಆರೋಗ್ಯ ವಿಚಾರಿಸಿದ ನಂತರ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ದುರ್ಘಟನೆಗೆ ಕಾರಣವಾಗಿರುವ ಬಿಬಿಎಂಪಿಯ ಅರಣ್ಯ ವಿಭಾಗದ ಉನ್ನತ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು ಹಲವು ಬಾರಿ ಹಳೆಯ ಮರಗಳು ಹಾಗೂ ಕೊಂಬೆಗಳನ್ನು ತೆಗೆಯುವಂತೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಬಿಬಿಎಂಪಿಯ ಅರಣ್ಯ ವಲಯದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಈ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಅಕ್ಷಯ್ ನಂತಹ ಹಕವಾರು ನಾಗರಿಕರ ಪ್ರಾಣಕ್ಕೆ ಸಂಚಕಾರ ಬಂದಿದೆ ಎಂದು ಸೀತಾರಾಮ್ ಗುಂಡಪ್ಪ ಆತಂಕ ವ್ಯಕ್ತಪಡಿಸಿದರು.
ಇಂತಹ ಅನೇಕ ದುರ್ಘಟನೆಗಳು ಪದೇಪದೇ ಸಂಭವಿಸಿದ್ದರೂ ಸಹ ಎಚ್ಚೆತ್ತುಕೊಳ್ಳುವಲ್ಲಿ ಅಧಿಕಾರಯ ವಿಫಲರಾಗುತ್ತಿದ್ದಾರೆ,
ಸರ್ಕಾರ ಅಧಿಕಾರಿಗಳ
ಉತ್ತರದಾಯಿತ್ವವನ್ನು ಪ್ರಶ್ನಿಸುವ ತಾಕತ್ತು ಹೊಂದಿದ್ದಲ್ಲಿ ಕೂಡಲೇ ಈ ವಿಭಾಗದ ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.

ಪಕ್ಷದ ಮುಖಂಡರುಗಳಾದ ಸರವಣ, ಇರ್ತಾದ್, ವೀಣಾ ಸರಾವ್, ಮಣಿಕಂಠ ಸೇರಿದಂತೆ ಅನೇಕ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದರು.