ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ: ಪ್ರಕರಣ ದಾಖಲು

Spread the love

ಮೈಸೂರು,ಫೆ.2: ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ ಎಸಗಿದ ಆರೋಪದ ಮೇಲೆ ನಾಲ್ವರು ಮಧ್ಯವರ್ತಿಗಳು ಸೇರಿ ಹಲವರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯವರ್ತಿಗಳಾದ ಸುಶೀಲ್ ಕುಮಾರ್,ವರದರಾಜನ್,ಪುಟ್ಟಸ್ವಾಮಿ ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕರಾದ ಏಕಾಂತ್ ಪ್ರಕರಣ ದಾಖಲಿಸಿದ್ದಾರೆ.

ಗೀತಾ ಎಂಬುವರು ಜಯಲಕ್ಷ್ಮಿಪುರಂ ಸ್ವತ್ತು ನಂ 23 ಮೇಲೆ ಲ್ಯಾಂಡ್ ಲೋನ್ ಅಪೇಕ್ಷಿಸಿ 1-07-2021 ರಂದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್ ಸಿಬ್ಬಂದಿಗಳು ವಕೀಲರ ಬಳಿ ಲೀಗಲ್ ಸಲಹೆ ಪಡೆದು ವಾಲ್ಯುಏಷನ್ ರಿಪೋರ್ಟ್ ಆಧಾರದ ಮೇಲೆ 1,65,00,000 ರೂ ಸಾಲ ನೀಡಿದ್ದಾರೆ.

ಮೈಸೂರು ದಕ್ಷಿಣ ಉಪನೊಂದಣಾಧಿಕಾರಿ ಕಚೇರಿಯಲ್ಲಿ 1 ನೇ ಪುಸ್ತಕ ನಂ1 Mys-1-01451-2021-22 ರಲ್ಲಿ ನೊಂದಣಿ ಆಗಿದೆ.ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಅವರು ಸ್ವತ್ತಿನ ಮಾರಾಟಗಾರರಾದ ಪುಟ್ಟರಾಜು ಅವರಿಗೆ ಚೆಕ್ ನೀಡಿ ದಾಖಲೆಗಳನ್ನ ಪಡೆದಿದ್ದಾರೆ.

ಆಗಸ್ಟ್ 23 ರ ವರೆಗೆ ಗೀತಾ ಅವರು ಸಾಲದ ಕಂತು ಕಟ್ಟಿ ನಂತರ‌ ಸ್ಥಗಿತಗೊಳಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಸಾಲ ಮರುಪಾವತಿಸುವಂತೆ ತಿಳಿಸಿದಾಗ ತಾವು ಮೋಸ ಹೋಗಿರುವುದಾಗಿ ಗೀತಾ ತಿಳಿಸಿದ್ದಾರೆ.

ಬ್ಯಾಂಕ್ ನವರು ಪರಿಶೀಲನೆ ಮಾಡಿದಾಗ ನೊಂದಣಿ ಆದ ದಾಖಲೆಯಲ್ಲಿ ಸದರಿ ಪುಸ್ತಕದಲ್ಲಿ ಶ್ವೇತಾ ಮೋಹನ್ ಕುಟ್ಟಂಡ ಹೆಸರಿನಲ್ಲಿ ಸ್ವತ್ತು ನೊಂದಣಿ ಆಗಿರುವುದು ಕಂಡುಬಂದಿದೆ.

ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಮಧ್ಯವರ್ತಿಗಳಾದ ಸುಶೀಲ್ ಕುಮಾರ್ ನಕಲಿ ದಾಖಲೆಗಳನ್ನ ಸೃಷ್ಟಿಸಿ ಯಾಮಾರಿಸಿರುವುದು ಗೊತ್ತಾಗಿದೆ.

ಪುಟ್ಟರಾಜು ಅವರು ಚೆಕ್ ಪಡೆದು ವರದರಾಜನ್,ವಿಕಾಸಿನಿ ಸೇರದಂತೆ ಹಲವರ ಹೆಸರಲ್ಲಿ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ.ಇದೀಗ ಗೀತಾ ಅವರು ಬ್ಯಾಂಕ್ ಗೆ ಅಸಲು 97,70,391 ರೂ ಜೊತೆಗೆ ಬಡ್ಡಿ ಸೇರಿ 1,09,10,780 ರೂ ಬಾಕಿ ಉಳಿಸಿಕೊಂಡಿದ್ದಾರೆ.

ಗೀತಾ ಅವರಿಂದ ಹಣ ಮರುಪಾವತಿ ಆಗದ ಹಿನ್ನಲೆ ಬ್ಯಾಂಕ್ ಮ್ಯಾನೇಜರ್ ಏಕಾಂತ್ ಮಧ್ಯವರ್ತಿಗಳ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.