ಬೆಂಗಳೂರು: ಬಿಜೆಪಿ ಅವಧಿಯಲ್ಲಿ 1,600 ಕೋಟಿ ರೂ ಬೆಂಗಳೂರಿನ ಅಭಿವೃದ್ಧಿಗೆ ನೀಡಿದ್ದು,ಆ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡದಿದ್ದರೆ ಹೀಗೆ ಪ್ರವಾಹದ ಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದ್ದಾರೆ.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿಂದು ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಬೆಂಗಳೂರಿಗೆ ಕಳೆದ 2 ವರ್ಷಗಳಲ್ಲಿ ಏನು ಮಾಡಿದ್ದೀರಿ ತಿಳಿಸಿ ಎಂದು ಕಾಂಗ್ರೆಸಿಗರನ್ನು ಒತ್ತಾಯಿಸಿದರು.

ಇಡೀ ಬೆಂಗಳೂರು ಮಳೆಯಿಂದಾಗಿ ಮುಳುಗುತ್ತಿದೆ, ಜನರು ಪರದಾಡುತ್ತಿದ್ದಾರೆ.
ಗ್ರೇಟರ್ ಬೆಂಗಳೂರು ಹೋಗಿ ವಾಟರ್ ಬೆಂಗಳೂರು ಆಗಿದೆ ಎಂದು ಟೀಕಿಸಿದರು.
ಮಳೆಯಿಂದಾಗಿ ಐದು ಜನರು ಸಾವನ್ನಪ್ಪಿದ್ದಾರೆ, ಇಂಥವರ ಸಾವಿನ ಮೇಲೆ ಕಾಂಗ್ರೆಸ್ ಸಾಧನೆಯ ಸಮಾವೇಶ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು, ಕಾಂಗ್ರೆಸ್‌ನ ತಪ್ಪಿನಿಂದಲೇ ಜನರು ಸತ್ತಿದ್ದಾರೆ, ಇಂತಹ ಸಮಾವೇಶ ಮಾಡುವ ನೈತಿಕ ಅರ್ಹತೆ ಸರ್ಕಾರಕ್ಕೆ ಇಲ್ಲ ಎಂದು ಗುಡುಗಿದರು.
ಬೆಂಗಳೂರಿನ ಸಾಯಿ ಬಡಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ಅಭಿವೃದ್ಧಿ ಮಾಡುತ್ತೇನೆಂದು ಹೇಳಿದ್ದರು. ಸಿಲ್ಕ್ ಬೋರ್ಡ್ ಬಳಿ ಕಳೆದ ಸಲವೂ ಪ್ರವಾಹವಾಗಿತ್ತು. ಇಷ್ಟಾದರೂ ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಬಿಜೆಪಿ ಅವಧಿಯಲ್ಲಿ ರಾಜಕಾಲುವೆ, ರಸ್ತೆ ಅಭಿವೃದ್ಧಿಗೆ 1,600 ಕೋಟಿ ರೂ. ನೀಡಲಾಗಿತ್ತು. ಅದನ್ನು ಕಾಂಗ್ರೆಸ್ ರದ್ದು ಮಾಡಿದೆ. ಆ ಅಭಿವೃದ್ಧಿ ಕಾರ್ಯ ನಡೆದಿದ್ದರೆ, ಈ ರೀತಿ ಪ್ರವಾಹ ಆಗುತ್ತಿರಲಿಲ್ಲ. ಬೆಂಗಳೂರಿನ ಪ್ರಗತಿಗೆ ಹಣ ನೀಡದೆ ಲೂಟಿ ಮಾಡಲು ಆ ಹಣವನ್ನು ಬಳಸಲಾಗಿದೆ. ಎಲ್ಲ ಹಣವನ್ನು ಸುರಂಗ ಮಾರ್ಗ ಯೋಜನೆಗೆ ಮೀಸಲಿಟ್ಟಿದ್ದಾರೆ. ಈಗ ಎಲ್ಲ ರಸ್ತೆಗಳಲ್ಲಿ ಸುರಂಗ ಆಗಿದೆ ಎಂದು ಆರೋಪಿಸಿದರು.

ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್ ಅಳವಡಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಯಾವ ಕೆಲಸವೂ ಆಗಿಲ್ಲ. ಏಪ್ರಿಲ್ 15 ರಂದೇ ಹವಾಮಾನ ಇಲಾಖೆ ಮಳೆ ಜೋರಾಗಲಿದೆ ಎಂದು ಸೂಚನೆ ನೀಡಿತ್ತು. ಬಿಬಿಎಂಪಿಯಿಂದ ಮುಂಜಾಗ್ರತಾ ಸಭೆ ನಡೆಸಲಿಲ್ಲ. ಸಮಾವೇಶಕ್ಕೆ ಮಾತ್ರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡರು.14 ಸಾವಿರ ಗುಂಡಿ ಮುಚ್ಚಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈಗ ಕಾಂಗ್ರೆಸ್ ಪಕ್ಷವನ್ನು ಮುಚ್ಚಿಹಾಕಲು ಜನರೇ ಗುಂಡಿ ತೆಗೆಯುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಯುದ್ಧಕ್ಕೆ ಸಾಕ್ಷಿ ಕೇಳುವ ಇವರು, ಜನರು ಸಾಯುತ್ತಿರುವುದನ್ನು ಬಂದು ನೋಡಲಿ. ಇದಕ್ಕೆ ಯಾವುದೇ ಸಾಕ್ಷಿ ಬೇಕಿಲ್ಲ. ಬಿಜೆಪಿ ಅವಧಿಯಲ್ಲಿ ಪ್ರತಿ ವರ್ಷ ಏಳೆಂಟು ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ನೀಡಿರುವ ಹಣವೆಲ್ಲವನ್ನೂ ಸುರಂಗ ನಿರ್ಮಿಸಲು ಬಳಸಲಾಗುತ್ತಿದೆ. ಬೆಂಗಳೂರು ಮುಳುಗುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ ಎಂದು ಅಶೋಕ್ ಆರೋಪಿಸಿದರು.