ಬೆಂಗಳೂರು: ಈ ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಬಿಜೆಪಿ ಬೆಳಕು ಚೆಲ್ಲಿದೆ. ಆದರೆ ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಪುಸ್ತಕದಲ್ಲಿ ಬಹಳ ಸುಳ್ಳುಗಳಿವೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರು ಗ್ಯಾರಂಟಿಯನ್ನು ಹೊಗಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ ಮುಂದೆ ಇಡಲಿದ್ದೇವೆ. ಜನರ ನ್ಯಾಯಾಲಯದಲ್ಲಿ ಸರ್ಕಾರದ ಬಗ್ಗೆ ಜನರೇ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ ವೀಲ್ ಚೇರ್‌ನಲ್ಲಿದ್ದರೆ, ಸರ್ಕಾರ ಇನ್ನೂ ತೆವಳುತ್ತಿದೆ,18 ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿದ್ದಾರೆ. ಮಾನಗೇಡಿ ಕಾಂಗ್ರೆಸ್‌ನವರು ವಿಧಾನಪರಿಷತ್‌ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಎಸ್.ಎಲ್.ಧರ್ಮೇಗೌಡ ಅವರನ್ನು ಎಳೆದು ಅಪಮಾನ ಮಾಡಿದ್ದರು. ಆದರೂ ಬಿಜೆಪಿ ಧರಣಿ ಮಾಡಿದ್ದೇ ತಪ್ಪು ಎನ್ನುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಕ್ಕೆ ಬಿಜೆಪಿ ಪ್ರತಿಭಟಿಸಿದೆ. ಕಾಂಗ್ರೆಸ್ ಚಿತಾವಣೆಯಿಂದ ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿದ್ದಾರೆ. ಹಿಂದಿನ ಯಾವುದೇ ಸ್ಪೀಕರ್ ಈ ರೀತಿ ದೀರ್ಘಾವಧಿಯ ಅಮಾನತು ಮಾಡಿಲ್ಲ ಎಂದು ಕಿಡಿಕಾರಿದರು.
ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಮ್ ಮೀಸಲಾತಿಗೆ ವಿರೋಧ ಕೇಳಿಬಂದಿತ್ತು. ತಜ್ಮುಲ್ಲಾ ಹುಸೇನ್ ಎಂಬ ನಾಯಕರು ಮುಸ್ಲಿಮ್ ಮೀಸಲಾತಿಯನ್ನು ವಿರೋಧಿಸಿದ್ದರು. ಈಗ ಕಾಂಗ್ರೆಸ್ ವೋಟ್‌ಬ್ಯಾಂಕ್‌ಗಾಗಿ ಮೀಸಲಾತಿ ನೀಡಿದೆ. ಹಿಂದೂ-ಮುಸ್ಲಿಂ ನಡುವೆ ಒಡಕು ತಂದು ಬ್ರಿಟಿಷರ ಕೆಲಸವನ್ನು ಕಾಂಗ್ರೆಸ್ ಮುಂದುವರಿಸುತ್ತಿದೆ. ಗುತ್ತಿಗೆಯಲ್ಲಿನ ಮೀಸಲಾತಿಯಿಂದಾಗಿ ಹಿಂದೂಗಳಿಗೆ ಅವಕಾಶ ಕಡಿಮೆಯಾಗಿದೆ. ಈಗಾಗಲೇ ಗುತ್ತಿಗೆದಾರರಲ್ಲಿ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಧರ್ಮಾಧಾರಿತ ಮೀಸಲಾತಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು. ಇದನ್ನು ಕೂಡ ಕಾಂಗ್ರೆಸ್ ಹೇಳಬೇಕು ಎಂದು ಅಶೋಕ್ ಒತ್ತಾಯಿಸಿದರು.
ಸಚಿವ ರಾಜಣ್ಣ ಹಾಗೂ ಅವರ ಮಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮತಿ ಪಡೆದು ಹನಿಟ್ರ್ಯಾಪ್ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಇದರ ಸೂತ್ರದಾರರು ಯಾರೆಂದು ತಿಳಿದುಬಂದಿದೆ. ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆಯವರೇ ಬಂದು ಚರ್ಚೆ ನಡೆಸುವ ಸ್ಥಿತಿ ಬಂದಿದೆ. ಇಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ ಎಂದು ಛೇಡಿಸಿದರು.
ಸರ್ಕಾರ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ಇದನ್ನು ಹೇಳಿದ್ದಾರೆ. ವಿರೋಧಿಗಳನ್ನು ಬಗ್ಗು ಬಡಿಯಬೇಕೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.