ಬೆಂಗಳೂರು, ಏ.3: ಬೆಂಗಳೂರಿನ
ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಬೆಳ್ಳಂಬೆಳಿಗ್ಗೆ ಮನೆಗೆ ಚಿರತೆ ನುಗ್ಗಿದ್ದು ಜನತೆ ಆತಂಕಕ್ಕೆ ಈಡಾಗಿದ್ದಾರೆ.
ಬೆಳಿಗ್ಗೆ 8 ಗಂಟೆ ವೇಳೆ ವೆಂಕಟೇಶ್ ಎಂಬುವರ
ಮನೆಗೆ ಲೀಲಾಜಾಲವಾಗಿ ಚಿರತೆ ನುಗ್ಗಿದೆ.ಆದರೆ ಅವರು ಮೊದಲು ಅದು ನಾಯಿ ಇರಬಹುದು ಎಂದು ಎಣಿಸಿದ್ದಾರೆ.
ಆದರೆ ತಕ್ಷಣ ಅದು ಚಿರತೆ ಎಂದು ಗೊತ್ತಾಗಿ ದೈರ್ಯದಿಂದ ಬಾಗಿಲನ್ನು ಲಾಕ್ ಮಾಡಿ ಹೊರ ಬಂದಿದ್ದಾರೆ ವೆಂಕಟೇಶ್.
ನಿನ್ನೆ ರಾತ್ರಿಯಿಡೀ ಮಂಜುನಾಥ್ ಎಂಬುವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ಸುತ್ತು ಹಾಕಿರುವ ಚಿರತೆ ಬೆಳಗ್ಗೆ ಬಾಡಿಗೆದಾರ ವೆಂಕಟೇಶ್ ಮನೆಯೊಳಗೆ ಹೋಗಿದೆ. ಕೂಡಲೇ ಮನೆ ಬಾಗಿಲನ್ನು ಲಾಕ್ ಮಾಡಿದ ವೆಂಕಟೇಶ್ ಅವರು ಅಕ್ಕಪಕ್ಕದವರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವೆಂಕಟೇಶ್ ಹಾಗೂ ಸ್ಥಳೀಯರು ಮನೆಯೊಳಗೆ ಚಿರತೆಯನ್ನು ಲಾಕ್ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಸಮೇತ ವೆಂಕಟೇಶ್ ಅವರ ಮನೆಗೆ ಆಗಮಿಸಿದ್ದಾರೆ.
ಅರಣ್ಯ ಸಿಬ್ಬಂದಿ ಹೆಲ್ಮೆಟ್ ಧರಿಸಿ ಅರವಳಿಕೆ ಇಂಜೆಕ್ಷನ್ ಕೊಡಲು ಸಾಕಷ್ಟು ಶ್ರಮಿಸಿದ್ದಾರೆ. ತಜ್ಞ ವೈದ್ಯ ಕಿರಣ್ ಅವರು ಚಿರತೆಗೆ ಅರವಳಿಕೆ ಇಂಜೆಕ್ಷನ್ ಡಾಟ್ ನೀಡಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಬೋನಿಗೆ ಶಿಫ್ಟ್ ಮಾಡಲಾಗಿದೆ.

ಚಿರತೆ ನೋಡಲು ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಭಾರೀ ಜನ ಸೇರಿದ್ದರು. ಮನೆಯ ಸುತ್ತಮುತ್ತ ಪೊಲೀಸರು ಭದ್ರತೆ ಕೈಗೊಂಡು ಹೊರಗಡೆ ನಿಂತ ಜನರನ್ನು ಚದುರಿಸಿದರು.
ಅರಣ್ಯ ಇಲಾಖೆ, ವೈದ್ಯರು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಸತತ 4 ಗಂಟೆಗಳ ಆಪರೇಷನ್ ಯಶಸ್ವಿಯಾಗಿದೆ. ಆತಂಕದಲ್ಲಿದ್ದ ಜನತೆ, ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದು, ವೆಂಕಟೇಶ್ ದಂಪತಿಯ ದಿಟ್ಟತನಕ್ಕೆ ಶಬ್ಬಾಶ್ ಹೇಳಿದ್ದಾರೆ.