ಕೆರೆಗಳ ಉಳಿವಿಗೆ ಹೋರಾಟ:ಎಷ್ಟೇ ಕೇಸು ಹಾಕಿದರೂ ಜಗ್ಗಲ್ಲ:ಮುಖ್ಯಮಂತ್ರಿ ಚಂದ್ರು

Spread the love

ಬೆಂಗಳೂರು: ಕೆರೆಗಳ ಉಳಿವಿಗೆ ಹೋರಾಟ ಮಾಡಯೇ ಮಾಡುತ್ತೇವೆ, ಸರ್ಕಾರ ಎಷ್ಟೇ ಕೇಸುಗಳನ್ನು ಹಾಕಿದರು ನಾವು ಬಗ್ಗುವುದಿಲ್ಲ ಜಗ್ಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.

ಗುರುವಾರ ಹೇರೋಹಳ್ಳಿ ಕೆರೆ ವೀಕ್ಷಣೆ ಮಾಡಿ ಸ್ಥಳೀಯ ಶಾಸಕರು ಕೆರೆ ಅಭಿವೃದ್ಧಿಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೆರೆ ವೀಕ್ಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಕೆರೆಗಳ ಉಳಿವಿಗಾಗಿ ಆಮ್ ಆದ್ಮಿ ಪಕ್ಷ ಎಲ್ಲಾ ರೀತಿಯ ಹೋರಾಟಗಳಿಗೂ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಹೇರೋಹಳ್ಳಿ ಕೆರೆ ಹೋರಾಟದ ಸಂದರ್ಭದಲ್ಲಿ ಪಕ್ಷದ ನಾಯಕರುಗಳ ಮೇಲೆ ಸ್ಥಳೀಯ ಶಾಸಕ ಎಸ್ ಟಿ ಸೋಮಶೇಖರ್ ಒತ್ತಡದ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿದ್ದಾರೆ.ಆದರೆ‌ ಇಂತಹ ಎಷ್ಟೇ ಕೇಸುಗಳನ್ನು ಹಾಕಿದರೂ ನಾವು ಜಗ್ಗುವುದಿಲ್ಲ ಎಂದು ತಿಳಿಸಿದರು.

ಕೆರೆಗಳನ್ನು ಒತ್ತುವರಿ ಮಾಡಿರುವ ರಿಯಲ್ ಎಸ್ಟೇಟ್ ಮಾಫಿಯಾ ಗಳ ವಿರುದ್ಧ ಪಕ್ಷ ಹೋರಾಟ ಮಾಡುತ್ತದೆ. ಎಲ್ಲಾ ಕೆರೆಗಳಲ್ಲಿ ಎಸ್ ಟಿ ಪಿ ಘಟಕಗಳನ್ನು ತೆರೆಯಬೇಕು , ನಾಗರಿಕ ಸೌಲಭ್ಯಕ್ಕಾಗಿ ಶೌಚಾಲಯ ಉತ್ತಮ ಟ್ರ್ಯಾಕ್ ಗಳು ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಅವರು ಮಾತನಾಡಿ,ಇಂದು ಯಶವಂತಪುರ ಕ್ಷೇತ್ರಕ್ಕೆ ಬರಲು ಶಾಸಕರ ವೀಸಾ ಅಗತ್ಯವಾಗಿದೆ ಎಂದು ವ್ಯಂಗ್ಯ ವಾಡಿದರು.

ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ಅವರುಗಳ ಮೇಲೆ ಪೊಲೀಸ್ ಕೇಸುಗಳನ್ನು ಹಾಕಿಸುವ ಮೂಲಕ ಶಾಸಕರು ನಡೆಸುತ್ತಿರುವ ದಬ್ಬಾಳಿಕೆ – ದೌರ್ಜನ್ಯಗಳನ್ನು ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,ಜನ ಸಾಮಾನ್ಯರ ಹಿತಕ್ಕಾಗಿ ಪಕ್ಷದ ಕಾರ್ಯಕರ್ತರು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಯಶವಂತಪುರ ರಿಪಬ್ಲಿಕ್ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್, ಜಗದೀಶ್ ಚಂದ್ರ, ಶಶಿಧರ್ ಆರಾಧ್ಯ , ಡಾ. ದಿನೇಶ್ ಕುಮಾರ್ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.