ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ:ಬೆಲೆ ಏರಿಕೆ ಮೂಲಕ ಲೂಟಿ-ಅಶೋಕ್

Spread the love

ಬೆಂಗಳೂರು, ಏ.2: ಕಾಂಗ್ರೆಸ್ ಚುನಾವಣೆಗೆ ಮುನ್ನ ಬೆಲೆ ಏರಿಕೆ ಮಾಡಲ್ಲ, ಐದು ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿ ಎರಡು ವರ್ಷಗಳಲ್ಲಿ ಹಾಲಿನ ದರ ಮೂರು ಬಾರಿ ಏರಿಕೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಸರ್ಕಾರದಲ್ಲಿ 136 ಜನ ಕಳ್ಳರು ಇದ್ದಾರೆ, ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ, ಅದಕ್ಕಾಗಿ ಬೆಲೆ ಏರಿಕೆ ಮೂಲಕ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ವೇಳೆ ಮಾತನಾಡಿದ ಅಶೋಕ್, ಬಜೆಟ್ ನಲ್ಲಿ ಯಾವುದೇ ತೆರಿಗೆ ತೋರಿಸದೆ ಇದೀಗ ಬೆಲೆ ಏರಿಕೆ ಮಾಡಲಾಗಿದೆ,ಐದು ಗ್ಯಾರಂಟಿಗಾಗಿ ಕರ್ನಾಟಕದ ಮನೆ ಮನೆ ಲೂಟಿ ಆಗ್ತಿದೆ ಎಂದು ಗುಡುಗಿದರು.

ಸಚಿವರು ಅಂಗಡಿ ತೆರೆದಿದ್ದಾರೆ. ಶೇ.40 ಆರೋಪಕ್ಕೆ ಸಾಕ್ಷಿ ಇಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಶೇ.60 ರಷ್ಟು ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ ನಲ್ಲಿ 15,000 ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗಷ್ಟೇ ಸಿಎಂ, ಸರ್ಕಾರ ಗಾಲಿ ಕುರ್ಚಿಯಲ್ಲಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ತನ್ನ ಓಲೈಕೆ ರಾಜಕಾರಣಕ್ಕಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಯಾವ ಜಮೀನನ್ನು ಬೇಕಾದರೂ ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಣೆ ಮಾಡಿಕೊಳ್ಳುವ ಅವಕಾಶ ಕೊಟ್ಟಿತ್ತು. ಇದರಿಂದ ರೈತರ ಜಮೀನು, ದೇವಸ್ಥಾನ, ಮಠ-ಮಂದಿರಗಳ ಆಸ್ತಿ ಎಲ್ಲ ಕಬಳಿಕೆ ಆಗುತ್ತಿತ್ತು. ಈಗ ಎನ್ ಡಿಎ ಸರ್ಕಾರ ತಂದಿರುವ ತಿದ್ದುಪಡಿಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ, ಮಠ ಮಾನ್ಯಗಳ ಜಮೀನು ಸುರಕ್ಷಿತವಾಗಿ ಉಳಿಯಲಿದೆ,ಅದಕ್ಕಾಗಿ ಪ್ರಧಾನಮಂತ್ರಿಗಳಿಗೆ, ಕೇಂದ್ರ ಗೃಹ ಸಚಿವರಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಶೋಕ್ ತಿಳಿಸಿದರು.

ಧರಣಿ ವೇಳೆ ತಮಟೆ ಬಾರಿಸಿ ಗೀತೆಗಳನ್ನು ಹಾಡಿ ಬಿಜೆಪಿಗರು ಸರ್ಕಾರ ಹಾಗೂ ಸಿಎಂ,ಡಿಸಿಎಂ ಮುಖವಾಡಗಳನ್ನು ಧರಿಸಿ ಅಣಕು ಪ್ರದರ್ಶನ ಕೂಡಾ ಮಾಡಿದ್ದು ವಿಶೇಷವಾಗಿತ್ತು.