ಬೆಂಗಳೂರು: ಬೆಂಗಳೂರಿನ ನಗರ್ತಪೇಟೆಯಲ್ಲಿನ ಪ್ಲಾಸ್ಟಿಕ್ ಚಾಪೆ ಉತ್ಪಾದನಾ ಘಟಕದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಮಂದಿ ಸಜೀವ ದಹನವಾದ ಘಟನೆ ನಡೆದಿದೆ.
ಒಂದೇ ಕುಟುಂಬದ ನಾಲ್ವರು ಮದನ್ (38), ಪತ್ನಿ ಸಂಗೀತಾ (33), ಮತ್ತು ಮಕ್ಕಳಾದ ಮಿತೇಶ್ (8) ಮತ್ತು ವಿಹಾನ್ (5) ಹಾಗೂ ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಮೃತಪಟ್ಟ ನತದೃಷ್ಟರು.
ಮದನ್ ಅವರು ರಾಜಸ್ಥಾನ ಮೂಲವರಾಗಿದ್ದು, ತಮ್ಮ ಕುಟುಂಬದೊಂದಿಗೆ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರು.
ಐದು ನೀರಿನ ಬೌಸರ್‌ಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದವು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಸಂಕೀರ್ಣದ ವಸತಿ ವಿಭಾಗದೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ವೇಗವಾಗಿ ಹರಡಿತು, ಮಾಹಿತಿ ಬಂದ ತಕ್ಷಣ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿದ್ದು, ಒಳಗೆ ಸಿಲುಕಿರುವವರನ್ನು ಹುಡುಕಲು ಅಗ್ನಿಶಾಮಕ ದಳದವರು ಬಹಳ ಪ್ರಾಯಾಸ ಪಟ್ಟರು.
ಕಟ್ಟಡವು ನಗರದ ಜನನಿಬಿಡ ವ್ಯಾಪಾರ ಕೇಂದ್ರದಲ್ಲಿ ಇರುವುದರಿಂದ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ, ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಇರಬಹುದೆಂದು ಶಂಕಿಸಲಾಗಿದೆ.