ಬೆಂಗಳೂರಿನಲ್ಲಿ ಎಟಿಎಂ ಹಣ ಎಗರಿಸುತ್ತಿದ್ದ 6 ಮಂದಿ ಬಂಧನ

Spread the love

ಬೆಂಗಳೂರು: ತೆಲುಗು ಚಿತ್ರ ಲಕ್ಕಿ ಭಾಸ್ಕರ್
ಮಾದರಿಯಲ್ಲಿ ಎಟಿಎಂ ಹಣ ಎಗರಿಸುತ್ತಿದ್ದ ಆರು ಮಂದಿಯನ್ನು ಬೆಂಗಳೂರಿನ ಮಹಾಲಕ್ಷ್ಮಿಪುರಂ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಲಕ್ಕಿ ಭಾಸ್ಕರ್ ತೆಲಗು ಸಿನಿಮಾದಲ್ಲಿ ನಾಯಕ‌ ನಟ ಬ್ಯಾಂಕ್ ಉದ್ಯೋಗಿ. ಬ್ಯಾಂಕ್​ನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ನಾಯಕ ಅದನ್ನು ಬೇರೆ ಬೇರೆ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದ.

ಅದರಿಂದ ಬಂದ ಲಾಭದ ದುಡ್ಡನ್ನು ಮತ್ತೆ ಬ್ಯಾಂಕ್ ಖಜಾನೆಗೇ ತಂದಿಡುತ್ತಿದ್ದ. ಅದೇ ರೀತಿ ಮಾಡಿ ಶ್ರೀಮಂತನಾದ.ಇದು ಸಿನಿಮಾ. ಆದರೆ, ಅದೇ ರೀತಿ ಮಾಡುತ್ತಿದ್ದ ಆರು ಮಂದಿಯ ಗ್ಯಾಂಗ್ ಅನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್ ಹಾಗೂ ಜಸ್ವಂತ್ ಬಂಧಿತ ಆರೋಪಿಗಳು.

ಶಿವು ಹೊರತು ಪಡಿಸಿ ಉಳಿದ ಐದು ಮಂದಿ ಎಟಿಎಂಗಳಿಗೆ ಹಣ ತುಂಬುವ ಸೆಕ್ಯೂರ್ ವ್ಯಾಲ್ಯೂ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ‌ ಕ್ಯಾಶ್ ಆಫೀಸರ್​ಗಳಾಗಿ ಕೆಲಸ ಮಾಡುತ್ತಿದ್ದವರು.

ಎಟಿಎಂನಲ್ಲಿ ಹಣ ತುಂಬುವುದು ಸೇರಿದಂತೆ ದುರಸ್ತಿ ಕೆಲಸ ಕೂಡ ಮಾಡುತ್ತಿದ್ದರು. ಈ ವೇಳೆ ಎಟಿಎಂನಿಂದ ಹಣ ತೆಗೆದು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಇದನ್ನು ಬೇರೆ ಕಡೆ ಹೂಡಿಕೆ ಮಾಡಿ ಹಣ ಡಬಲ್ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಆಡಿಟಿಂಗ್ ಸಮಯದಲ್ಲಿ ಬೇರೆ ಎಟಿಎಂನಿಂದ ಹಣ ತಂದು ಮತ್ತೊಂದರಲ್ಲಿ ಹಾಕುವ ಕೆಲಸ ಮಾಡುತ್ತಿದ್ದರು.

ಹೀಗೆ ಒಟ್ಟು ನಾಲ್ಕೈದು ಎಟಿಎಂನಿಂದ 43.76 ಲಕ್ಷ ರೂ. ಹಣ ದೋಚಿದ್ದರು.

ನಂತರ‌ ತಾವು ಓಡಾಡುತ್ತಿದ್ದ ಎಸ್​​ಯುವಿ ಕಾರಿನಲ್ಲಿಯೇ ಇಟ್ಟುಕೊಂಡು ಹಣ ಹಂಚಿಕೊಳ್ಳುವಾಗ ಕಿರಿಕ್ ಮಾಡಿಕೊಂಡಿದ್ದಾರೆ.

ಅದು ಹೇಗೊ ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ಗೊತ್ತಾಗಿದೆ.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ಒಟ್ಟು 52 ಲಕ್ಷ ರೂ.ಹಾಗೂ ಕದ್ದ ಹಣದಲ್ಲಿ ಖರೀದಿಸಿದ್ದ 40 ಲಕ್ಷ ರೂ. ಮೌಲ್ಯದ ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ.