ಮೈಸೂರು,ಮೇ.1: 12ನೇ ಶತಮಾನದಲ್ಲಿ ಮಾನವಕುಲಕ್ಕೆ ಮಾರ್ಗದರ್ಶಕರಾಗಿದ್ದ ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ತನ್ವೀರ್ ಸೇಠ್ ಅವರು ತಿಳಿಸಿದರು
ದೂರ ದೃಷ್ಟಿಯ ಆಲೋಚನೆಗಳು ಮತ್ತು ಸಮಾಜವು ಯಾವ ರೀತಿ ಕಟ್ಟಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದುವಂತಹ ಬಸವಣ್ಣನವರ ತತ್ವದಲ್ಲಿ ಲಿಂಗಭೇದ ಜಾತಿಭೇದ ಅಸಮಾನತೆ ಇರಲಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣುವ ಪ್ರವೃತ್ತಿ ಬಸವಣ್ಣವರಲ್ಲಿ ಇತ್ತು ಎಂದು ಹೇಳಿದರು.
ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ತತ್ವ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಯಾವ ಜಾತಿ ಯಾವ ಅಂತಸ್ತು ಎನ್ನುವ ಭೇದವಿಲ್ಲದೆ ಅವರು ಜೀವಿಸಿದರು ಎಂದು ತಿಳಿಸಿದರು.
ದಾಸರು ಮತ್ತು ಶರಣರು ನಮಗೆ ನೀಡಿರುವ ಉಪಯುಕ್ತವಾದಂತಹ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಹೇಳಿರುವಂತಹ ವಚನಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಕೇವಲ ಇವ ಯಾರವಾ ಇವ ಯಾರವ ಇವ ನಮ್ಮವ ನಮ್ಮವ ಎನ್ನುವ ವಚನಗಳಿಗೆ ಸೀಮಿತವಾಗದೆ, ಎಲ್ಲರನ್ನೂ ಅಪ್ಪಿಕೊಂಡು ಎಲ್ಲರನ್ನೂ ಜೊತೆಗೂಡಿಸಿ ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕಬೇಕು ಎಂದು ತನ್ವೀರ್ ಸೇಠ್ ತಿಳಿಸಿದರು.
ಮತ್ತೊಬ್ಬ ಶಾಸಕ ಟಿ.ಎಸ್ ಶ್ರೀವತ್ಸ ಮಾತನಾಡಿ ಬಸವಣ್ಣನವರು ಮಾಡಿದಂತಹ ಅನೇಕ ಹೋರಾಟಗಳು, ಶ್ರಮಗಳು ಕಾರಣಕ್ಕೆ ಲಿಂಗ ಸಮಾಜ ಬಹಳ ಹಿಂದೆಯೇ ಸಮಾಜದಲ್ಲಿ ಇದ್ದ ಶೋಷಣೆಯ ವಿರುದ್ಧ ಧ್ವನಿಯನ್ನು ಎತ್ತಿತು. ಈಗಾಗಲೇ ಅವರೇ ಹೇಳಿರುವಂತೆ ಸ್ವಂತ ಸಹೋದರಿಗೆ ಲಿಂಗಧಾರಣೆಯನ್ನು ಮಾಡುವುದರ ಮುಖಾಂತರ ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎಂಬ ನಿಟ್ಟಿನಲ್ಲಿ ಬಸವಣ್ಣನವರ ಪ್ರಯತ್ನ ಸಾಕಷ್ಟು ಇದೆ ಎಂದು ಹೇಳಿದರು.
ಸಮಾಜದಲ್ಲಿ ಅಂಕುಡೊಂಕನ್ನು ತುಂಬಾ ಸರಳ ಭಾಷೆಯಲ್ಲಿ ಸರಳವಾದ ಕನ್ನಡದಲ್ಲಿ ನಮ್ಮೆಲ್ಲರಿಗೂ ಅರ್ಥವಾಗುವಂತ ರೀತಿಯಲ್ಲಿ ಬಸವಣ್ಣನವರ ವಚನಗಳು ತಿಳಿಸುತ್ತವೆ. ಇವರ ವಚನಗಳು ನಮಗೆ ಅನೇಕ ಸಂದರ್ಭದಲ್ಲಿ ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ಅವರು ಮಾತನಾಡಿ ಬಸವಣ್ಣನವರು ಈ ರಾಷ್ಟ್ರಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ಒಬ್ಬ ಮಹಾನ್ ಚೇತನ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ ವ್ಯಕ್ತಿ ಎಂದು ನುಡಿದರು.
ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಅವರು ಮಾತನಾಡಿ ಬಸವಣ್ಣ ಅವರನ್ನು ಜಗಜ್ಯೋತಿ ಎಂದು ಕರೆಯುತ್ತೇವೆ, ಅವರ ಬಗ್ಗೆ ಸಭೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು, ಉಪನ್ಯಾಸ ಏರ್ಪಡಿಸುವುದರ ಜೊತೆಗೆ ಪ್ರತಿದಿನವೂ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಹಿತಿ ಮತ್ತು ಸಂಶೋಧಕರಾದ ಡಾ. ರಾಜಶೇಖರ ಜಮದಂಡಿ ಅವರು ಮುಖ್ಯ ಭಾಷಣ ಮಾಡಿ ಬಸವಣ್ಣ ಎಂದರೆ ನೆನಪಾಗುವುದು ಬಸವಣ್ಣನವರ ಚಳುವಳಿ, ಬಸವಣ್ಣನವರ ಕ್ರಾಂತಿ, ಸಾಮಾಜಿಕ ಸುಧಾರಣೆ ಇವೆಲ್ಲವೂ ನಮಗೆ ನೆನಪು ಬರುತ್ತದೆ ಎಂದು ಹೇಳಿದರು.
ನಮ್ಮ ಭಾರತ ಪ್ರಾಚೀನ ಕಾಲದಿಂದಲೂ ಸ್ನೇಹ, ಸೌಹಾರ್ದತೆ, ಆತ್ಮೀಯತೆಯ ಕಂಪನ್ನು ಸೇರಿಸಿ ಬಹುತ್ವದ ಏಕತೆಯೇ ನೆಲೆಗೊಂಡು ಕೊಟ್ಟಿರುವಂತಹದ್ದು, ಈ ನೆಲವನ್ನು ಅನೇಕ ಸಂತರು, ಸೂಫಿಗಳು, ದಾರ್ಶನಿಕರು ಎಲ್ಲರೂ ತಮ್ಮ ತಮ್ಮ ಆಧ್ಯಾತ್ಮಿಕ ತತ್ವ ಆದರ್ಶ ಚಿಂತನೆಗಳಲ್ಲಿ ಈ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿಕೊಟ್ಟರು.
ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು.ಸದನಂದಯ್ಯ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.