ಯಾದಗಿರಿ: ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.
ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ(30) ಬಂಧಿತ ಆರೋಪಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಪರಮಣ್ಣ, ಬಾಲಕಿ ಜೊತೆ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ, ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದ.
ವಿವರ:
ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಳು. ನಂತರ ನೊಂದ ಯುವತಿಯ ತಾಯಿಗೂ ವಿಷಯ ತಿಳಿಸಲಾಯಿತು.ಮಗುವಿಗೆ ಶಹಾಪುರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ಮಾಹಿತಿ ತಿಳಿದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ವಸತಿ ಶಾಲೆಯ ಶೌಚಾಲಯದಲ್ಲಿ ಹೆರಿಗೆ ಆದರೂ ಪ್ರಾಂಶುಪಾಲರಿಗೆ, ವಾರ್ಡನ್ ಹಾಗೂ ಸ್ಟಾಪ್ ನರ್ಸ್ಗೆ ಮಾಹಿತಿ ಇಲ್ಲದ ಕಾರಣಕ್ಕೆ ಮೂವರ ಮೇಲೆ ಕೇಸ್ ದಾಖಲು ಮಾಡಿ ಅಮಾನತ್ತು ಮಾಡಲಾಗಿದೆ. ಅಷ್ಟೇ ಅಲ್ಲದೆ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ ವಿದ್ಯಾರ್ಥಿನಿಯ ಸಹೋದರನ ಮೇಲೂ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.