ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ದೇವರಾಜ ಮಾರುಕಟ್ಟೆ ಮುಂಭಾಗ ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಸಿ ಘೋಷ ವಾಕ್ಯದೊಂದಿಗೆ ಗ್ರಾಹಕರಿಗೆ ಉಚಿತ ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕು, ಆ ಮೂಲಕ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ರಕ್ಷಣೆ ಜವಾಬ್ದಾರಿ ಕೇವಲ ಸರ್ಕಾರ ಹಾಗೂ ಸ್ಥಳೀಯ ಆಡಳಿತದ್ದು ಎಂಬ ಮನೋಭಾವದಿಂದ ಹೊರಬರಬೇಕು. ಸಾರ್ವಜನಿಕರು ತಮ್ಮ ಹೊಣೆ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ಬ್ಯಾಗುಗಳು ಹಾಗೂ ವಸ್ತುಗಳನ್ನು ಬಳಸುವ ದನ್ನು ನಿಲ್ಲಿಸಿ ಸುಂದರ ಪರಿಸರ ನಿರ್ಮಿಸಿ, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲ ಬಳಸಿ ಪ್ಲಾಸ್ಟಿಕ್ ನಿಂದ ಪರಿಸರವನ್ನು ದೂರವಿಡಿ ಎಂದು ಸಲಹೆ ನೀಡಿದರು.
ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಕೊಡುಗೆಯಾಗಿ ನೀಡಲು ಇಂದೇ ಶಪಥ ಮಾಡಿ. ನಿಮ್ಮ ಮನೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಮಾಡಿ ಎಂದು ತಿಳಿಹೇಳಿದರಲ್ಲದೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಗರದ ಸಂಘ ಸಂಸ್ಥೆಗಳು ಆಯೋಜಿಸಬೇಕೆಂದು ವಿಕ್ರಮ್ ಅಯ್ಯಂಗಾರ್ ಕೋರಿದರು.
ಜಾಗೃತಿ ಯಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,ಎಸ್ ಎನ್ ರಾಜೇಶ್,ರವಿಚಂದ್ರ, ಹರೀಶ್ ನಾಯ್ಡು, ದುರ್ಗಾ ಪ್ರಸಾದ್, ರಾಕೇಶ್, ಶ್ರೀಕಾಂತ್ ಕಶ್ಯಪ್ ಮತ್ತಿತರರು ಪಾಲ್ಗೊಂಡಿದ್ದರು.