ಮೈಸೂರು: ಈಗಾಗಲೇ ಹಲವು ವಿಶೇಷತೆಗಳಿಂದ ದಾಖಲೆಗಳನ್ನು ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಮೈಸೂರಿನ ಅವಧೂತ ದತ್ತ ಪೀಠ ಇದೀಗ ಮತ್ತೊಂದು ದಾಖಲೆ ಬರೆದಿದೆ.

ಈ ಬಾರಿ ಬೋನ್ಸಾಯಿ ವೃಕ್ಷಗಳ ಸಂಗ್ರಹಣೆಯಲ್ಲಿ ದಾಖಲೆ ಮಾಡಿದ್ದು ಇದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಸಕ್ತಿ,ಕಾಳಜಿ ಮತ್ತು ಪರಿಸರ ಪ್ರೇಮ ಕಾರಣ.
ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿನ ವಿಶ್ವವಿಖ್ಯಾತ ಕಿಷ್ಕಿಂಧಾ ಮೂಲಿಕಾ ಬೋನ್ಸಾಯಿ ವನವು 2006 ರಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟಿದ್ದು ದೇಶಾದ್ಯಂತ ಎಲ್ಲ ಜನರು,ಪ್ರವಾಸಿಗರು ಹಾಗೂ ಭಕ್ತರ ಮನ ಸೂರೆಗೊಳ್ಳುತ್ತಿದೆ.
ಇದೇ ಜೂನ್ 6 ರಿಂದ 15ರ ವರೆಗೆ ನಡೆಯುತ್ತಿರುವ ವನದುರ್ಗಾ ಪೂಜೆಯ ಪ್ರಯುಕ್ತ ಆಶ್ರಮದ ಬೋನ್ಸಾಯಿ ವನದಲ್ಲಿ ಹೊಸದಾಗಿ ಸಾವಿರಾರು ಅತ್ಯಪರೂಪದ ಬೋನ್ಸಾಯಿ ವೃಕ್ಷಗಳನ್ನು ಸಂಗ್ರಹಿಸಲಾಗಿದೆ.
ಇವುಗಳನ್ನು ನಮ್ಮ ದೇಶವಷ್ಟೇ ಅಲ್ಲದೆ ಥೈವಾನ್,ಇಂಗ್ಲೆಂಡ್, ಜಪಾನ್ ಮತ್ತಿತರ ದೇಶಗಳಿಂದ ತರಿಸಲಾಗಿದೆ.
ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯಿ ವೃಕ್ಷಗಳಿರುವ ವನವೆಂಬ ಹೆಗ್ಗಳಿಕೆ ಪಡೆದಿರುವ ಅವಧೂತ ದತ್ತಪೀಠ ಈಗ ಮತ್ತೊಂದು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ಈಗ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಒಟ್ಟು 10836 ಬೋನ್ಸಾಯ್ ವೃಕ್ಷಗಳಿವೆ.
ಪುಣೆಯಲ್ಲಿ 3333 ಬೋನ್ಸಾಯ್ ವೃಕ್ಷಗಳಿದ್ದು ಅಲ್ಲಿನ ದಾಖಲೆಯನ್ನು ಅವಧೂತ ದತ್ತಪೀಠ ಮುರಿದಿದೆ.

ಇಂದು ಗಿನ್ನಿಸ್ ಸಂಸ್ಥೆಯ ಪ್ರತಿನಿಧಿ ಋಷಿನಾಥ್ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಶ್ರೀ ಸ್ವಾಮೀಜಿ ಅವರಿಗೆ ಪ್ರದಾನ ಮಾಡಿದರು.ಈ ವೇಳೆ ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಈ ಸುಂದರ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
