ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ:ವ್ಯಕ್ತಿಗೆ 5ವರ್ಷ ಕಠಿಣ ಸಜೆ

Spread the love

ಮಂಡ್ಯ,ಮಾ.8: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ 5ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಿ ಮಂಡ್ಯದ ಅತ್ಯಾಚಾರ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಮಂಡ್ಯ ಜಿಲ್ಲೆ ಕೆರಗೋಡು ಹೋಬಳಿ, ಎಸ್.ಐ.ಕೋಡಿಹಳ್ಳಿ ಗ್ರಾಮದ ಸಿದ್ದಲಿಂಗ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ.

9.12.2021 ರಂದು ಗ್ರಾಮದ ಬಳಿ ಇರುವ ಜಮೀನಿನಲ್ಲಿ ಸಂತ್ರಸ್ತ ಮಹಿಳೆ ಒಬ್ಬರೇ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದ ವೇಳೆ ಆರೋಪಿ ಸಿದ್ದಲಿಂಗ ಮಹಿಳೆಯ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ನಂತರ ಬೆದರಿಕೆ ಹಾಕಿ ಪರಾರಿಯಾಗಿದ್ದನು.

ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ತನಿಖಾಧಿಕಾರಿ ಕೆರೆಗೋಡು ಸರ್ಕಲ್ ಇನ್ಸ್‌ಪೆಕ್ಟರ್ ಕ್ಯಾತೇಗೌಡ‌ ಅವರು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮಂಡ್ಯದ ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆ ಅಡಿ ದಾಖಲಾದ ಪ್ರಕರಣಗಳನ್ನು ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿಲೀಪ್‌ ಕುಮಾರ ಅವರು, ಆರೋಪಿ ಸಿದ್ದಲಿಂಗನಿಗೆ ವಿವಿಧ ಸೆಕ್ಷನ್ ಗಳಡಿ ಮೂರು ತಿಂಗಳ ಸಾದಾ ಶಿಕ್ಷೆ, ಒಂದು ತಿಂಗಳ ಸಾದಾ ಶಿಕ್ಷೆ, ಒಂದು ವರ್ಷ ಸಾದಾ ಶಿಕ್ಷೆ, ಒಂದು ವರ್ಷ ಕಠಿಣ ಸಜೆ ಮತ್ತು 5,000ರೂ. ದಂಡ‌ ಶಿಕ್ಷೆ ವಿಧಿಸಿದ್ದಾರೆ.

ದಂಡ ಪಾವತಿಸಲು ತಪ್ಪಿದಲ್ಲಿ ಎರಡು ತಿಂಗಳ ಸಾದಾ ಶಿಕ್ಷೆ,ಅಲ್ಲದೆ ಭಾದಂಸಂ ಕಲಂ.509 ರ ಅಡಿಯಲ್ಲಿನ ಅಪರಾಧಕ್ಕೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ, ದಂಡವನ್ನು ಪಾವತಿಸಲು ತಪ್ಪಿದಲ್ಲಿ ಎರಡು ತಿಂಗಳ ಸಾದಾ ಶಿಕ್ಷೆ, ಭಾದಂಸಂ ಕಲಂ.323 ರ ಅಡಿಯಲ್ಲಿನ ಅಪರಾಧಕ್ಕೆ ಒಂದು ವರ್ಷ ಶಿಕ್ಷೆ. 5,000 ರೂ.ದಂಡ, ಭಾದಂಸಂ, ಕಲಂ.506 ರ ಅಡಿಯಲ್ಲಿನ ಅಪರಾಧಕ್ಕೆ ಒಂದು ವರ್ಷ ಶಿಕ್ಷೆ ಮತ್ತು 5,000 ರೂ. ದಂಡ, ಭಾದಂಸಂ ಕಲಂ.376 ಸ:ವಾ 511 ರ ಅಡಿಯಲ್ಲಿನ ಅಪರಾಧಕ್ಕೆ 5 ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ದಂಡ. ದಂಡವನ್ನು ಪಾವತಿಸಲು ತಪ್ಪಿದಲ್ಲಿ ಮೂರು ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ. ಹಾಗೂ ಎಲ್ಲಾ ಕಲಂಗಳ ಅಡಿಯಲ್ಲಿ ವಿಧಿಸಿದ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸತಕ್ಕದ್ದು ಎಂದು ಆದೇಶಿಸಿದರು. ಹಾಗೆಯೇ ದಂಡದ ಮೊತ್ತ 1,20,000 ರೂ.ಗಳಲ್ಲಿ 1,15,000 ರೂ. ಗಳನ್ನು ನೊಂದ ಮಹಿಳೆಗೆ ನೀಡಬೇಕೆಂದು, ಆದೇಶಿಸಿ ತೀರ್ಪು ನೀಡಿದರು. ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಮಹಿಳೆಗೆ 4,00,000 ರೂ.ಗಳನ್ನು ಪರಿಹಾರದ ರೂಪವಾಗಿ ಕೊಡುವಂತೆ ನ್ಯಾಯಾಧೀಶರು ಆದೇಶಿಸಿದರು.

ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್.ಶೆಣೈ ಅವರು ವಾದ ಮಂಡಿಸಿದರು.