ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು
ಗುಂಡಿನ ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ತಡರಾತ್ರಿ ಶೂಟೌಟ್ ನಡೆಸಲಾಗಿದ್ದು,ರಿಕ್ಕಿ ರೈ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಡದಿಯಲ್ಲಿರುವ ಮುತ್ತಪ್ಪ ರೈ ಅವರ ನಿವಾಸದ ಮುಂಭಾಗ ಕಾಂಪೌಂಡ್ ಬಳಿ ಶುಕ್ರವಾರ ತಡ ರಾತ್ರಿ 12.50ರ ಸುಮಾರಿಗೆ 2 ಸುತ್ತಿನ ಗುಂಡಿನ ದಾಳಿ ನಡೆದಿದೆ.
ರಿಕ್ಕಿ ರೈ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿದೆ. ಈ ವೇಳೆ ರಿಕ್ಕಿ ರೈ, ಮೂಗು, ಕೈಗೆ ಗುಂಡು ತಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ಹೊರಟಿದ್ದಾಗ ಈ ದಾಳಿ ನಡೆದಿದೆ.
ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟನ್ನೇ ಗುರಿಯಾಗಿಸಿ 2 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದ ಕಾರಣ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ರಿಕ್ಕಿ ಪಾರಾಗಿದ್ದಾರೆ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಫ್ಐಆರ್:
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣ ಸಂಬಂಧ ಮುತ್ತಪ್ಪ ರೈನ 2ನೇ ಪತ್ನಿ ಅನುರಾಧಾ ಸೇರಿದಂತೆ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಕೇಶ್‌ಮಲ್ಲಿ, 2ನೇ ಪತ್ನಿ ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಪ್ರಕರಣ ದಾಖಲಾಗಿದಗದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.