ಜನಮನ ಸೂರೆಗೊಂಡ ಪಂಜಿನ ಕವಾಯತು

Spread the love

ಮೈಸೂರು, ಅ.3- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂದು ರಾತ್ರಿ ನಡೆದ ಪಂಜಿನ ಕವಾಯತು ಜನಮನ ಸೂರೆಗೊಂಡಿತು.

ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನ ಸಮೂಹದ ನಡುವೆ ವರ್ಣರಂಚಿತ ಪಂಜಿನ ಕವಾಯತು ನಡೆಯಿತು.

ಪಂಜಿನ ಕವಾಯತು ಕಾರ್ಯಕ್ರಮದಲ್ಲಿ 400 ಮಂದಿಯಿಂದ ನಡೆದ ವಿಶಿಷ್ಟ ವಾದ್ಯ ಸಂಗೀತ, ದ್ರೋಣ್ ಶೋ, ಅಶ್ವಪಡೆಯ ಸಾಹಸ ಜನರನ್ನು ಆಕರ್ಷಿಸಿತು.

ಡಮರುಗ ಶೀರ್ಷಿಕೆ ಅಡಿ ನಡೆದ ವಿಶಿಷ್ಟವಾದ ರಾಜ್ಯ ಸಂಗೀತ ರೋಮಾಂಚನ ನೀಡಿತು.

ಡೊಳ್ಳು, ಡ್ರಮ್, ಚಂಡೇ, ಪಿಟೀಲು, ನಗಾರಿ, ವಯೋಮಿ ಮೂಲಕ ಬನ್ನಿಮಂಟಪದಲ್ಲಿ ಸಂಗೀತ ಲೋಕವೇ ಸೃಷ್ಟಿಯಾಗಿತ್ತು, ಇದರೊಂದಿಗೆ ನೃತ್ಯ ಕಲಾವಿದರು ಸಹ ಹೆಜ್ಜೆ ಹಾಕುವ ಮೂಲಕ ಮತ್ತಷ್ಟು ಮನೋರಂಜನೆ ನೀಡಿದರು.

ಮೈಸೂರಿನ ಅಶ್ವಾರೋಹಿ ಪಡೆಯ ಟೆಂಟ್ ಪಿಗ್ಗಿಂಗ್ ಜನರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.ಅಷ್ಟು ಅದ್ಭುತ ವಾಗಿತ್ತು.

ಆಗಸದಲ್ಲಿ 3000ಕ್ಕೂ ಹೆಚ್ಚು ದ್ರೋಣಗಳನ್ನು ಹಾರಿಸುವ ಮೂಲಕ ಕೌತುಕವನ್ನೇ ಸೃಷ್ಟಿಸಲಾಗಿತ್ತು‌. ರಣಾಂಗದಲ್ಲಿರುವ ಯೋಧ, ರಾಷ್ಟ್ರೀಯ ಪಕ್ಷಿ ನವಿಲು, ಹುಲಿ, ಗರುಡ, ಕಾಳಿಂಗ ಮರ್ದನ ಶ್ರೀ ಕೃಷ್ಣ, ಕಾವೇರಿ ಮಾತೆ, ಅಂಬಾರಿ ಹೊತ್ತು ಸಾಗುವ ಆನೆ ಚಾಮುಂಡೇಶ್ವರಿ ದೇವಿಯ ಆಕೃತಿಗಳು ಆಗಸದಲ್ಲಿ ಮೂಡಿಬಂದಿತು.ಇದೆಲ್ಲ ವನ್ನು ಅಚ್ಚರಿ ಕಂಗಳಿಂದ ಜನತೆ ನೋಡಿದರು.

ಧಾರವಾಡ ಪೊಲೀಸ್ ತರಬೇತಿ ಶಾಲೆಯ 300 ಮಂದಿ ಪಂಜುಗಳಿಂದ ವಿವಿಧ ಅಕ್ಷರ ಕೃತಿಗಳನ್ನು ಬಾನಂಗಳದಲ್ಲಿ ಚಿತ್ತಾರ ಬಿಡಿಸಿದರು.

ಸುಸ್ವಾಗತ, ಜೈ ಚಾಮುಂಡಿ, ಗಾಂಧೀ ಜಯಂತಿ ಶುಭಾಶಯ, ಕರ್ನಾಟಕ ಪೊಲೀಸ್, ಜೈ ಹಿಂದ್ ಅಕ್ಷರಾ ಕೃತಿಗಳನ್ನು ಬಾನಿನಲ್ಲಿ ಮೂಡಿಸಿದ್ದರು.

ಇದಕ್ಕೂ ಮುನ್ನ ಅತ್ಯಾಕರ್ಷಕ ಪತ ಸಂಚಲನ ನಡೆಯಿತು. ರಾಜ್ಯಪಾಲರು ಪೆರೇಡ್ ಪರೀ ವೀಕ್ಷಣೆ ಮಾಡಿ ವಂದನೆ ಸ್ವೀಕರಿಸಿದರು. ಮೂರು ಸುತ್ತು ಗಾಳಿಯಲ್ಲಿ ಪೊಲೀಸರು ಗುಂಡು ಹಾರಿಸಿದರು.ನಂತರ 21 ಕುಶಾಲ ತೋಪುಗಳನ್ನು ಸಿಡಿಸಲಾಯಿತು. ಚೈತ್ರ ಹಾಗೂ ಡಾಕ್ಟರ್ ಸುಮಂತ್ ಸಿಸ್ಟರ್ ತಂಡದವರು ನಾಡಗೀತೆಯನ್ನು ಹಾಡಿದರು.

ರಾಜ್ಯಪಾಲ ತಾವರ್ ಚೆಂದ್ ಗೆಹ್ಲೋಟ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ ಸೇರಿದಂತೆ ಸಚಿವರುಗಳು, ಶಾಸಕರುಗಳು, ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.

ಕೋಟ್ಯಂತರ ಮಂದಿ ಮನೆಯಲ್ಲಿಯೇ ಚಂದನ ವಾಹಿನಿಯಲ್ಲಿ ಮೂಡಿ ಬಂದ ಈ ಎಲ್ಲಾ ಕಾರ್ಯಗಳನ್ನು ವೀಕ್ಷಿಸಿ ಖುಷಿ ಪಟ್ಟರು.