ಬೆಂಗಳೂರು: ಬೆಂಗಳೂರಿನಲ್ಲಿರುವ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಹಾಗೂ 14ನೇ ವರ್ಷದ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಆದ್ಮಿ ಪಕ್ಷವು ಕೇವಲ ರಾಜಕೀಯ ಸಂಘಟನೆಯಾಗಿರದೇ ಒಂದು ರಾಜಕೀಯ ಆಂದೋಲನ ವಾಗಿದೆ, ಆಡಳಿತದಲ್ಲಿರುವ ಭ್ರಷ್ಟ ವ್ಯವಸ್ಥೆಗೆ ಹಿಡಿದಿರುವ ಗ್ರಹಣವನ್ನು ಹೋಗಲಾಡಿಸಲು ಕನ್ನಡಿಗರೆಲ್ಲರೂ ಒಂದಾಗಿ ಪಕ್ಷದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ ಮಾತನಾಡಿ ಪರಂಪರಾನುಗತ ಪಕ್ಷಗಳ ಕುಟುಂಬ ರಾಜಕಾರಣ, ಸೃಜನ ಪಕ್ಷಪಾತ, ರಾಜಕೀಯದ ವ್ಯಾಪಾರಿಕರಣ ಇವೆಲ್ಲವನ್ನೂ ಮುಲೋಚ್ಚಾಟನೆ ಮಾಡಲು ಪಕ್ಷದೊಂದಿಗೆ ಎಲ್ಲರೂ ಕೈಜೋಡಿಸಬೇಕು. ನಮ್ಮೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಸಾಧನೆ ಕನಸು ಇದೆ. ಇವೆಲ್ಲವನ್ನೂ ಕನ್ನಡಿಗರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅಧಿಕಾರಯುತ ರಾಜಕಾರಣದಲ್ಲಿ ಜನಸಾಮಾನ್ಯನು ಭಾಗವಹಿಸಿದಾಗ ಮಾತ್ರ ಪರಿವರ್ತನೆ ಸಾಧ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅನೇಕ ನಾಯಕರುಗಳು ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರುಗಳಲ್ಲಿ ಪ್ರಮುಖವಾಗಿ ಖಾಸಗಿ ವಾಹಿನಿಯ ಮಾಜಿ ನಿರ್ದೇಶಕಿ , ಪ್ರಾಣಿ ರಕ್ಷಣಾ ಸಂಘದ ಮಧುಮಿತ ನಟರಾಜನ್, ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ನಂಜಪ್ಪ, ಚಂದ್ರಪ್ಪ, ರಾಘವೇಂದ್ರ, ಶಿವಸೇನೆ ಪಕ್ಷದ ನಾಯಕ ಮೋಹನ್ ಹಾಗೂ ರವಿ ಅಪಾರ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಂಭ್ರಮಾಚರಣೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ, ಲಕ್ಷ್ಮಿಕಾಂತ್ ರಾವ್, ಡಾ. ಸತೀಶ್ ಕುಮಾರ್, ಉಷಾ ಮೋಹನ್, ಸುಷ್ಮಾ ವೀರ್, ಅಶ್ವಿನ್ ಶೆಟ್ಟಿ, ಜಗದೀಶ್ ವಿ ಸದಂ, ರುದ್ರಯ್ಯ ನವಲಿ ಮಠ ಸೇರಿದಂತೆ ಅನೇಕ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದರು.
