ಬೆಂಗಳೂರು: ಕೈ ಲಾಗದವನು ಮೈಪರಚಿಕೊಂಡ ಎಂಬಂತೆ ಕೈಲಾಗದ ರಾಹುಲ್ ಗಾಂಧಿ ಚುನಾವಣಾ ಪ್ರಕ್ರಿಯೆ ಬಗ್ಗೆ ಕ್ಯಾತೆ ತೆಗೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಮೂರು ಲೋಕಸಭಾ ಚುನಾವಣೆಗಳಲ್ಲಿ ಮೂರಂಕಿ ದಾಟಲಾಗದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಳುಗಿಸಿ ಸೋತು ಸುಣ್ಣವಾಗಿರುವ ಬಾಲಕ ಬುದ್ಧಿಯ ರಾಹುಲ್ ಗಾಂಧಿ ಅವರು ಈಗ ಕರ್ನಾಟಕದಲ್ಲಿ ಚುನಾವಣಾ ಆಯೋಗದ ವಿರುದ್ಧ ಪಾದಯಾತ್ರೆ ಮಾಡುತ್ತಾರಂತೆ ಎಂದು ಟ್ವೀಟ್ ಮಾಡಿ ವ್ಯಂಗ್ಯ ವಾಡಿದ್ದಾರೆ.
ರಾಹುಲ್ ಗಾಂಧಿ ಅವರೇ, ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ ಮಾಡುತ್ತಿದ್ದೀರಿ, ಹರಿಯಾಣ, ಮಹಾರಾಷ್ಟ್ರ, ದೆಹಲಿ ನಂತರ ಈಗ ಬಿಹಾರದಲ್ಲೂ ಹೀನಾಯ ಸೋಲಿನ ಮುನ್ಸೂಚನೆ ಸಿಕ್ಕಿದೆಯೇ ಎಂದು ಕುಟುಕಿದ್ದಾರೆ.
ಇಷ್ಟಕ್ಕೂ ನಿಮಗೆ ಕರ್ನಾಟಕ ಈಗ ನೆನಪಾಯಿತೇ,ಕಳೆದ 24 ತಿಂಗಳಲ್ಲಿ 2,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದಾಗ ಬರಲಿಲ್ಲ,ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಪೂರೈಕೆಯಿಂದ 500ಕ್ಕೂ ಹೆಚ್ಚು ಗರ್ಭಿಣಿ, ಬಾಣಂತಿ ಮಹಿಳೆಯರು, ನವಜಾತ ಶಿಶುಗಳು ಮರಣ ಹೊಂದಿದಾಗ ಬರಲಿಲ್ಲ,ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 50ಕ್ಕೂ ಹೆಚ್ಚು ಬಡವರು ಆತ್ಮಹತ್ಯೆ ಮಾಡಿಕೊಂಡಾಗಲೂ ಬರಲಿಲ್ಲ
ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರದ ಎಡವಟ್ಟಿನಿಂದ 11 ಜನ ಅಮಾಯಕ ಯುವಕರು ಮೃತಪಟ್ಟಾಗಲೂ ಬರಲಿಲ್ಲ,ಈಗ ನಾಳೆ ಎದುರಾಗಲಿರುವ ಬಿಹಾರ ಚುನಾವಣಾ ಸೋಲಿಗೆ ಕುಂಟು ನೆಪ ಸೃಷ್ಟಿಸಿ ತಮ್ಮ ವೈಫಲ್ಯಕ್ಕೆ ಅಸಂಟಿಸಿಪೇಟರಿ ಬೇಲ್ ತೆಗೆದುಕೊಳ್ಳೋಕೆ ಬರುತ್ತಿದ್ದೀರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಲಜ್ಜೆಗೇಡಿತನಕ್ಕೆ ಕನ್ನಡಿಗರು ರೋಸಿ ಹೋಗಿದ್ದಾರೆ
ಅದ್ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಿದ್ದೀರೋ ಎಂದು ಅಶೋಕ್ ಗರಂ ಆಗಿ ಹೇಳಿದ್ದಾರೆ.