ಮಂಡಳಿ ರದ್ದಾಗಬೇಕು, ಪಹಣಿಯಲ್ಲಿ ಹೆಸರು ತೆಗೆಸಿಹಾಕಬೇಕು: ಆರ್‌.ಅಶೋಕ್

ಬೆಂಗಳೂರು: ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ‌ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ವಕ್ಫ್‌ ಮಂಡಳಿ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಕ್ಫ್‌ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ. ಇದನ್ನು ಬಳಸಿಕೊಂಡು ವಕ್ಫ್‌ ಮಂಡಳಿ ರೈತರ ಜಮೀನು ನುಂಗುತ್ತಿದೆ. ಕಾಂಗ್ರೆಸ್‌ ಅಧಿಕಾರ ಪಡೆಯುವ ರಾಜ್ಯಗಳಲ್ಲಿ ಮಿನಿ ಪಾಕಿಸ್ತಾನ ನಿರ್ಮಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬೌರಿಂಗ್‌ ಆಸ್ಪತ್ರೆಯದ್ದು 2 ಎಕರೆ ಜಮೀನು ಇದ್ದು, ಅದನ್ನು ಕೂಡ ವಕ್ಫ್‌ ಮಂಡಳಿ ಕಬಳಿಕೆ ಮಾಡಿತ್ತು. ನಾನು ಸಚಿವನಾಗಿದ್ದಾಗ ಅದರ ದಾಖಲೆಗಳನ್ನು ತರಿಸಿ ನೋಡಿದರೆ ಯಾವುದೋ ಹಳೆ ದಾಖಲೆಗಳನ್ನು ತಂದರು. ಬಳಿಕ ಹೋರಾಟ ಮಾಡಿ ಆಸ್ತಿ ಉಳಿಸಿದೆ.ಈಗ ರೈತರು ಕಂಗಾಲಾಗಿ ತಮ್ಮ ಆಸ್ತಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಎಂದರೆ ಅಹಿಂದ ನಾಯಕ ಅಲ್ಲ. ಅವರು ಮುಸ್ಲಿಮರ ಚಾಂಪಿಯನ್‌ ಆಗಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ ಬಳಿಕ ರೇಷನ್‌ ಕಾರ್ಡ್‌ ಜಿಹಾದ್‌ ಆರಂಭಿಸಿದ್ದಾರೆ. 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆಯೊಬ್ಬರು ಈಗ ಕಾರ್ಡ್‌ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಬಡವರ ಪರ ಎಂದು ಹೇಳಿಕೊಳ್ಳುತ್ತಾರೆ. ಹಾಲು ಹಾಗೂ ಆಲ್ಕೋಹಾಲ್‌ ದರ ಏರಿಕೆ, ಮುದ್ರಾಂಕ ಶುಲ್ಕ ಏರಿಕೆ, ಅನ್ನ ಪಡೆಯುವವರಿಗೆ ಕನ್ನ, ಔಷಧಿಗೆ ಕನ್ನ ಮೊದಲಾದ ಕ್ರಮಗಳ ಮೂಲಕ ಸಿಎಂ ಸಿದ್ದರಾಮಯ್ಯನವರು ಕನ್ನರಾಮಯ್ಯ ಎಂದು ಹೆಸರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಮಂತ್ರಾಲಯ, ವಿಧಾನಸೌಧ, ವಿಶ್ವೇಶ್ವರಯ್ಯನವರ ಶಾಲೆ, ಬಡವರ ಭೂಮಿ ಉಳಿಯಲು ಸೂಪರ್‌ಮ್ಯಾನ್‌ ಆಗಿ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಅವರು ತರಲಿರುವ ತಿದ್ದುಪಡಿ ಮಸೂದೆಯಿಂದ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ. ಅಲ್ಲಿತನಕ ಸಿದ್ದರಾಮಯ್ಯನವರು ಸಿಎಂ ಆಗಿಯೇ ಇರುತ್ತಾರೋ ಇಲ್ಲವೋ ಎಂದು ಅಶೋಕ್ ಹೇಳಿದರು.