ಸಿದ್ದರಾಮಯ್ಯ 100 ಪರ್ಸೆಂಟ್‌ ಭ್ರಷ್ಟರು-ಅಶೋಕ್ ವಾಗ್ದಾಳಿ

Spread the love

ಬೆಂಗಳೂರು: ರಾಜ್ಯದ ಜನರಿಗೆ 40 ಪರ್ಸೆಂಟ್‌ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಪರ್ಸೆಂಟ್‌ ಭ್ರಷ್ಟರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಕಳೆದ 18 ತಿಂಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಿನನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರು ತಮ್ಮ 40 ವರ್ಷದ ಜೀವನ ತೆರೆದ ಪುಸ್ತಕ ಅಂದವರು. ಇವತ್ತು ಅವರ ತೆರೆದ ಪುಸ್ತಕದ ಪುಟಗಳನ್ನ ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಕಾಣುತ್ತಿವೆ.ತಾವೆ ನೇಮಕ ಮಾಡಿರುವ ಪೊಲೀಸ್ ಅಧಿಕಾರಿಯಿಂದ ವಿಚಾರಣೆ ಎದುರಿಸುತ್ತಿರುವುದು ಕನ್ನಡಿಗರ ದುರ್ದೈವ ಎಂದು ಹೇಳಿದರು.

ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ಭ್ರಷ್ಟಾಚಾರದ ಬಗ್ಗೆ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಪ್ರದಾನ ಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಇದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ.

ಅದು ಪ್ರಧಾನಿ ಮೋದಿ ಅವರು ಮಾಡಿರುವ ಆರೋಪವಲ್ಲ. ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ. ಮದ್ಯ ಮಾರಾಟಗಾರರ ಸಂಘ ಬರೆದಿರುವ ಪತ್ರವನ್ನ ಒಮ್ಮೆ ಮುಖ್ಯಮಂತ್ರಿಗಳು ತರಿಸಿಕೊಂಡು ಓದಬೇಕು ಎಂದು ತಿರುಗೇಟು ನೀಡಿದರು.

ಸಾಕ್ಷಿ ಬೇಕಾದರೆ ಸಿದ್ದರಾಮಯ್ಯನವರು ಮದ್ಯ ಮಾರಾಟಗಾರರ ಸಂಘದ ಆರೋಪದ ತನಿಖೆ ಮಾಡಲು ಮತ್ತೊಂದು ಎಸ್ ಐಟಿ ರಚಿಸಲಿ. ಮದ್ಯ ಮಾರಾಟಗಾರರು ಮಾಡುತ್ತಿರುವ ಆರೋಪ ಸುಳ್ಳಾದರೆ ಅವರ ಲೈಸೆನ್ಸ್ ರದ್ದು ಮಾಡಿ ಅಂಗಡಿಗಳಿಗೆ ಬೀಗ ಹಾಕಿಸಿ ಎಂದು ತಾಕೀತು ಮಾಡಿದರು.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ ಶೇ. 40ರಷ್ಟು ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ. 40 ಪರ್ಸೆಂಟ್ ಕಮಿಷನ್ ಆರೋಪ ಕಾಂಗ್ರೆಸ್ ನ ಟೂಲ್ ಕಿಟ್ ಎಂಬುದು ಈಗ ಸಾಕ್ಷಿ ಸಮೇತ ಋಜುವಾತಾಗಿದೆ ಎಂದು ಅಶೋಕ್ ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಗುತ್ತಿಗೆ ಕೆಲಸಗಳನ್ನು ಮಾಡುವುದನ್ನು ಬಿಟ್ಟೆ 6 ವರ್ಷವಾಗಿತ್ತು. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಕಟ್ಟಿದ ಸುಳ್ಳಿನ ಮಹಲು ಸಂಪೂರ್ಣ ಕುಸಿದುಬಿದ್ದಿದೆ ಎಂದು ತಿಳಿಸಿದರು.

ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಪ್ರಕಾರ ಅನುದಾನ ಬೇಕಾದರೆ ಶಾಸಕರು ತಗ್ಗಿ ಬಗ್ಗಿ ನಡೆಯಬೇಕಂತೆ. ಬೆಂಗಳೂರಿನ ಜನತೆಗೆ, ಜಯನಗರದ ಜನತೆಗೆ ನಮ್ಮ ತೆರಿಗೆ ನಮ್ಮ ಹಕ್ಕು ಅನ್ವಯಿಸುವುದಿಲ್ಲವಾ ಡಿಸಿಎಂ ಡಿಕೆ ಶಿವಕುಮಾರ್ ಅವರು ಪಾಳೇಗಾರರೂ ಅಲ್ಲ, ನಿಜಾಮರ ಕಾಲದ ರಜಾಕರು ಅಲ್ಲ ಎಂದು ಗುಡುಗಿದರು.

ಸಿಎಂ ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ, ಜನ ಕಾಂಗ್ರೆಸ್ ಪಕ್ಷವನ್ನ ಗಂಟು ಮೂಟೆ ಕಟ್ಟಿಸಿ ಶಾಶ್ವತವಾಗಿ ಮನೆಗೆ ಕಳುಹಿಸೋದು ಗ್ಯಾರಂಟಿ ಎಂದು ಅಶೋಕ್ ಎಚ್ಚರಿಸಿದರು.