ಬೆಂಗಳೂರು: ಐದು ವರ್ಷ ನಾನೇ ಅಂತ ದಿಲ್ಲಿತನಕ ಹಾದಿ ಬೀದಿಯಲ್ಲಿ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ 10 ಪಾಲಿಕೆಗಳ 25,000ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ಮಾಡುತ್ತಿರುವುದು ಕಾಣುತ್ತಿಲ್ಲ, ಕಿವಿಗೂ ಬಿದ್ದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಕುರ್ಚಿ ಕಿತ್ತಾಟದಲ್ಲಿ, ಬಣ ಬಡಿದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿರುವ ರಾಜ್ಯ ಸರ್ಕಾರದ ಯಾವ ಮಂತ್ರಿಗಳೂ ಇದುವರೆಗೆ ಪ್ರತಿಭಟನಾ ನಿರತ ಪಾಲಿಕೆ ಸಿಬ್ಬಂದಿಯನ್ನು ಭೇಟಿ ಮಾಡುವ ಗೋಜಿಗೇ ಹೋಗಿಲ್ಲ ಎಂದು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಅಧಿಕಾರವಿಲ್ಲದ ಕುರ್ಚಿಯಲ್ಲಿ ಎಷ್ಟು ದಿನ ಅಂಟಿಕೊಂಡು ಕೂರುತ್ತೀರಿ,ರಾಜೀನಾಮೆ ಕೊಟ್ಟು ಹೊರಡಿ. ಒಂದು ಸುಭದ್ರ, ಸುಸ್ಥಿರ, ಜನಪರ ಆಡಳಿತ ಕೊಡಬಲ್ಲ ಬಲಿಷ್ಠ ಮುಖ್ಯಮಂತ್ರಿಗಾಗಿ ಕನ್ನಡಿಗರು ಕಾಯುತ್ತಿದ್ದಾರೆ ಎಂದು ಅಶೋಕ್ ವ್ಯಂಗ್ಯ ಸಲಹೆ ನೀಡಿದ್ದಾರೆ.