ವಿಚಾರಣೆ ನಡೆಸುವ ಮೊದಲೇ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ :‌ ಅಶೋಕ್ ಕಿಡಿ

Spread the love

ಬೆಂಗಳೂರು: ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ರಾಜ್ಯ ಸರ್ಕಾರ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ ಕೊಡಲು ಹೊರಟಿದೆ‌ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪಿಸಿದ್ದಾರೆ.

ಮೊದಲು ತನಿಖೆ ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಲಿ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದಾಗ ಹಾಗೆ ಆಗಿಯೇ ಇಲ್ಲ ಎಂದಿದ್ದರು, ಬಾಂಬ್‌ ಸ್ಫೋಟವಾದಾಗಲೂ ಅದು ವ್ಯಾಪಾರದ ಜಗಳ ಎಂದು ಹೇಳಿದ್ದರು. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆಯೂ ಇದೇ ರೀತಿ ಹೇಳಿದ್ದರು. ನಾಗಮಂಗಲದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದರ ಬಗ್ಗೆ ಮೊದಲು ಪರಿಶೀಲಿಸಲಿ,ಇದನ್ನೂ ಹಾಗೆಯೇ ಬಿಡಬೇಡಿ ಎಂದು ತಿಳಿಸಿದರು.

ವಿದೇಶಕ್ಕೆ ಹೋದ ರಾಹುಲ್‌ ಗಾಂಧಿ, ಭಾರತದ ವಿರುದ್ಧ ಮಾತಾಡುವುದರ ಜೊತೆಗೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್‌ ಆಡಳಿತ ಇರುವ ಕಡೆಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಬ್ಬದ ವಾತಾವರಣ ಇರುತ್ತದೆ. ಸವಾಲು ಹಾಕುವವರನ್ನು ಜೈಲಿಗೆ ಹಾಕುವ ಬದಲು ಪೊಲೀಸರು ಅವರನ್ನು ಕರೆದು ಕಾಫಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಒಕ್ಕಲಿಗ ಸಮುದಾಯದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಗೌರವ ಹಾಳು ಮಾಡಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ. ಒಕ್ಕಲಿಗರ ಮೇಲೆ ಅಷ್ಟು ಒಲವಿದ್ದರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತೆಗೆದು ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ಅಶೋಕ್ ಸವಾಲು ಹಾಕಿದರು.

ಜನಪ್ರಿಯ ನಾಯಕ, ವಿಶ್ವನಾಯಕ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ. 25,000 ಕಾರ್ಯಕರ್ತರು 58,000 ಬೂತ್‌ಗಳಲ್ಲಿ ರಕ್ತದಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.