ಸರ್ಕಾರ ರಾಜ್ಯಪಾಲರ ಮೇಲೆ ಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸಿದೆ:ಅಶೋಕ್

ಬೆಂಗಳೂರು:ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಮುಜುಗರ ಅನುಭವಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯಪಾಲರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸಲು ಹೊರಟಿದೆ ಇದು ಖಂಡನೀಯ ಮತ್ತು ಅಕ್ಷಮ್ಯ ಅಪರಾಧ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸರ್ಕಾರದ ಸರಣಿ ಭ್ರಷ್ಟಾಚಾರ ಬಯಲಾದಾಗಿನಿಂದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಹಲವಾರು ಕಾಂಗ್ರೆಸ್ ನಾಯಕರು ಸಂವಿಧಾನಿಕ ಹುದ್ದೆ ಎಂಬುದನ್ನೂ ಮರೆತು ರಾಜ್ಯಪಾಲರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಬಾಂಗ್ಲಾದೇಶದ ರೀತಿ ದಾಳಿ ಮಾಡುವ ಬೆದರಿಕೆ ಒಡ್ಡುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್, ರಾಜ್ಯಪಾಲರ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಹೊರಿಸುವುದು, ಬಿಜೆಪಿ ಏಜೆಂಟ್ ಎಂದು ಛೇಡಿಸುವುದು, ಹೀಗೆ ಸರ್ಕಾರ ರಾಜ್ಯಪಾಲರಿಗೆ ಅಗೌರವ ತೋರುತಲೇ ಬಂದಿದೆ ಎಂದು ಆರೋಪಿಸಿದ್ದಾರೆ.

ರಾಜಭವನದಲ್ಲಿ ಯಾವುದೇ ಪ್ರಾಸಿಕ್ಯೂಷನ್ ಅನುಮತಿ ಮನವಿ ಬಾಕಿ ಇಲ್ಲ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ,ಆದರೆ ಮುಖ್ಯಮಂತ್ರಿಗಳ ವಿರುದ್ಧ ಮಾತ್ರ ಪ್ರಾಸಿಕ್ಯೂಷನ್ ಅನುಮತಿ ನೀಡಿ ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪ ಹಸಿ ಸುಳ್ಳು ಎಂಬುದು ಸಾಬೀತಾಗಿದೆ ಎಂದು ಅಶೋಕ್‌ ತಿಳಿಸಿದ್ದಾರೆ.