ಡಿ.ಬಿ.ಕುಪ್ಪೆ: ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಎಲ್ಲ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ಅರ್ಜುನನ ಪ್ರತಿರೂಪದಂತಿರುವ ಸ್ಮಾರಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾಪ್ಟನ್ ಎಂದೇ ಖ್ಯಾತನಾಗಿದ್ದ ಅರ್ಜುನ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಬಳಿ ಮದಗಜ ಸೆರೆ ಕಾರ್ಯಾಚರಣೆ ವೇಳೆ 2023ರ ಡಿಸೆಂಬರ್ 4ರಂದು ಏಕಾಂಗಿಯಾಗಿ ಹೋರಾಡಿ ಮಡಿದ, ಮಾವುತ ಮತ್ತು ಹಲವು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ತನ್ನ ಜೀವ ಬಲಿಕೊಟ್ಟ, ಅರ್ಜುನನ ಅಗಲಿಕೆಯ ನೋವು ನಿರಂತರವಾಗಿ ಕಾಡುತ್ತದೆ ಎಂದು ತಿಳಿಸಿದರು.
ನರಹಂತಕ ಹುಲಿ ಸೆರೆ ಕಾರ್ಯಾಚರಣೆ ಅಥವಾ ಆನೆ ಸೆರೆ ಕಾರ್ಯಾಚರಣೆ ಎಂದರೆ ಮೊದಲು ಬರುತ್ತಿದ್ದ ಹೆಸರೇ ಅರ್ಜುನನದು, ಅಷ್ಟು ವಿಶ್ವಾಸಾರ್ಹತೆ ಇದ್ದ ಅರ್ಜುನನ ಅಕಾಲಿಕ ಸಾವಿನ ನೋವಿದೆ ಎಂದು ಖಂಡ್ರೆ ಹೇಳಿದರು.
ಅರ್ಜುನನ ನೆನಪು ಚಿರಸ್ಥಾಯಿಯಾಗಿ ಉಳಿಯುವಂತೆ ಯಸಳೂರು ಮತ್ತು ಡಿಬಿಕುಪ್ಪೆಯ ಬಳ್ಳೆಯಲ್ಲಿ ಎರಡು ಸ್ಮಾರಕ ನಿರ್ಮಿಸಲಾಗಿದೆ, ಮೊದಲಿಗೆ ಬಳ್ಳೆಯಲ್ಲಿ ಸ್ಮಾರಕ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.
ಈಸ್ಮಾರಕಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು, ಅರ್ಜುನ ಆನೆ ಪಾಲ್ಗೊಂಡ ವಿವಿಧ ಕಾರ್ಯಾಚರಣೆಗಳ ಚಿತ್ರ, ದಸರಾ ಮಹೋತ್ಸವದ ಅಪರೂಪದ ಕ್ಷಣಗಳ ಚಿತ್ರ ಎಲ್ಲವನ್ನೂ ಇಲ್ಲಿ ಪ್ರದರ್ಶಿಸುವ ಮೂಲಕ ಅರ್ಜುನ ಆನೆಯ ಶೌರ್ಯ, ಸಾಹಸ ಎಲ್ಲರಿಗೂ ತಿಳಿಯುವಂತೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸ್ಮಾರಕ 2.98 ಮೀಟರ ಎತ್ತರ ಇದೆ. 3.74 ಮೀಟರ್ ಉದ್ದ ಇದೆ. ಅರ್ಜುನ ಆನೆಯ ಸ್ಮಾರಕ 650 ಕೆ.ಜಿ. ತೂಕ ಇದೆ. ಇದನ್ನು ಕಲಾವಿದ ಮಂಗಳೂರು ಮೂಲದ ಧನಂಜಯ ಅವರು ನಿರ್ಮಿಸಿದ್ದಾರೆ, ಅರ್ಜುನ ಆನೆಯೇ ನಮ್ಮ ಮುಂದೆ ನಿಂತಿರುವಂತೆ ಕಾಣುತ್ತದೆ. ಇದಕ್ಕಾಗಿ ಕಲಾವಿದರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಈಶ್ವರ ಖಂಡ್ರೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕ ಮಾದು, ಸಿಸಿಎಫ್ ಮಾಲತಿ, ಡಿಸಿಎಫ್ ಸೀಮಾ ಮತ್ತಿತರರು ಭಾಗವಹಿಸಿದ್ದರು.