ಕೇಂದ್ರ ಸರ್ಕಾರದ ಬೆಲೆ ಏರಿಕೆ,ರಾಜ್ಯ ಬಿಜೆಪಿ ವಿರುದ್ಧ ಏ.17 ಕಾಂಗ್ರೆಸ್ ಪ್ರತಿಭಟನೆ

Spread the love

ಬೆಂಗಳೂರು: ಕೇಂದ್ರ ಸರ್ಕಾರದ ಬೆಲೆ ಏರಿಕೆ, ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಏ.17 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲುದೆ ಎಂದು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ ಎಂದು ಹೇಳಿದರು.

ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ ಎಂದು ಪ್ರಶ್ನಿಸಿದ ಡಿಕೆಶಿ, ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್ ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಜಾಸ್ತಿ ಮಾಡಿ ಉದ್ಘಾಟನೆ ಮಾಡಿ‌, ಇವರ ಯಾತ್ರೆಗೆ ‘ಗಿಫ್ಟ್’ ಕಳಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದರು.

ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ಎಲ್ಲರು ಕೇಳಬೇಕು, ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು ಎಂದು ಟಾಂಗ್ ನೀಡಿದರು.

ಬುಧವಾರ ಕಚ್ಚಾ ತೈಲದ ಬೆಲೆ ಶೇ. 4.23 ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ನ ಮೂಲ ದರ ಪ್ರತಿ ಲೀಟರ್ ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ ‌103 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ ಗೆ ರೂ.60 ರೂಪಾಯಿ ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ ರೂ.91 ರೂಪಾಯಿ ಇದೆ. ರೂ. 43 ಲಾಭ ಮಾಡುತ್ತಿದ್ದಾರೆ. ಶೇಕಡ 60 ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ರೈತರ ಬದುಕನ್ನು ಉಳಿಸಲು ಹಾಲಿನ ದರ ಏರಿಕೆ ಮಾಡಿದೆ, ಶಾಸಕರಾದ ವಿನಯ್ ಕುಲಕರ್ಣಿ ಅವರು ಪಶುಸಂಗೋಪನೆ ಮಾಡುತ್ತಿದ್ದಾರೆ, ಎಷ್ಟು ಖರ್ಚು ವೆಚ್ಚಗಳು ಹೆಚ್ಚಾಗಿವೆ ಎಂದು ಅವರನ್ನೇ ಕೇಳಬೇಕು, ಬಿಜೆಪಿಯವರು ಜಾನುವಾರುಗಳ ಬೂಸಾ, ಹಿಂಡಿ ಬೆಲೆಯನ್ನು ಏಕೆ ಕಡಿಮೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು.

ಹಾಲಿನ ದರ ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆಯಿದೆ. ಕರ್ನಾಟಕದಲ್ಲಿ 42 ರೂಪಾಯಿ ಇದ್ದರೆ. ಕೇರಳ 52 ರೂ, ಗುಜರಾತ್ 53 ರೂ, ದೆಹಲಿ 55 ರೂ, ಮಹಾರಾಷ್ಟ್ರ 52 ರೂ, ತೆಲಂಗಾಣ 58 ರೂ, ಅಸ್ಸಾಂ 60 ರೂ, ಹರಿಯಾಣ 56 ರೂ, ರಾಜಸ್ಥಾನ 50 ರೂ, ಮಧ್ಯಪ್ರದೇಶ 52 ರೂ, ಪಂಜಾಬ್ 56 ರೂ, ಉತ್ತರ ಪ್ರದೇಶ 56 ರೂಪಾಯಿ ಬೆಲೆಯಿದೆ ಎಂದು ವಿವರಿಸಿದರು‌.

ನೀರಿನ ಬೆಲೆ ಏರಿಕೆಯನ್ನು ಅತ್ಯಂತ ಕಡಿಮೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿ ಬಡವರ ಪರವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ 52 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ಡಿಸಿಎಂ ಸಮರ್ಥಿಸಿಕೊಂಡರು.