ಮೈಸೂರು: ಮೈಸೂರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಹೊರತು ಪಡಿಸಿ ಅನ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಕರ್ನಾಟಕ ಸೇನಾಪಡೆ ಒತ್ತಾಯಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿ ತೇಜೇಶ್ ಲೋಕೇಶ್ ಗೌಡ ಮಾತನಾಡಿದರು.
ಈಗ ನಿವೇಶನ ಪಡೆದ ವ್ಯಾಪಾರಿಗಳು ಎಪಿಎಂಸಿ ಇಲಾಖೆಯ ನಕ್ಷೆ ,ಪ್ಲಾನ್, ಕಾಯ್ದೆ, ನಿಯಮದ ಆಶೋತ್ತರಗಳಿಗೆ ವಿರುದ್ಧವಾಗಿ, ನಿವೇಶನವನ್ನು ಹಲವಾರು ಭಾಗಗಳನ್ನಾಗಿ ವಿಂಗಡಿಸಿ, ಮಳಿಗೆಗಳನ್ನು ನಿರ್ಮಿಸಿ ಅಧಿಸೂಚಿತವಲ್ಲದ ವ್ಯಾಪಾರ ವಹಿವಾಟು ನಡೆಸಲು, ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿರುವುದು ಕಂಡುಬಂದಿದೆ ಎಂದು ಹೇಳಿದರು.

ಈ ಅಕ್ರಮವನ್ನು ಎಪಿಎಂಸಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಡೆಯದೆ ಎಪಿಎಂಸಿ ಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ
ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿದಿನ ಸಲ್ಲಬೇಕಾದ ಲಕ್ಷಾಂತರ ಎಪಿಎಂಸಿ ಶುಲ್ಕ (ಸೆಸ್) ಪಾವತಿಯಾಗದೆ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ಹೇಳಿದರು.
ಎಪಿಎಂಸಿ ಲೈಸೆನ್ಸ್ ಹೊಂದಿರುವ ವ್ಯಾಪಾರಿಯು ಸತತವಾಗಿ ಮೂರು ವರ್ಷ ಗಳು ವ್ಯಾಪಾರ, ವಹಿವಾಟು ನಡೆಸದೆ ಹಾಗೂ ಆರ್‌ಎಂಸಿ ಶುಲ್ಕ (ಸೆಸ್) ಪಾವತಿಸದೆ ಇದ್ದಲ್ಲಿ, ಎಪಿಎಂಸಿಯು ವ್ಯಾಪಾರಿಗೆ ನೀಡಿರುವ ಲೈಸೆನ್ಸ್ ರದ್ದುಪಡಿಸಿ ನಿವೇಶನದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಪೂರ್ಣ ಅಧಿಕಾರ ಹೊಂದಿದೆ.
ನಿವೇಶನಗಳಲ್ಲಿ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಿಭಜಿಸಬಾರದು ಹಾಗೂ ಬೇರೆಯವರಿಗೆ ಬಾಡಿಗೆಗೆ ನೀಡಬಾರದು, ಇನ್ನಿತರ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು, ಜೊತೆಗೆ ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚಿನ ವಿದ್ಯುತ್ ಮೀಟರ್ ಇರಬಾರದೆಂದು ನಿಯಮವಿದೆ.
ಮೈಸೂರಿನ ಸ್ಥಳೀಯ ರೈತರ ಭೂಮಿಯನ್ನು ವಶಪಡಿಸಿಕೊಂಡು ಇಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಯಾಗಿದೆ. ಈಗ ನೋಡಿದರೆ ಸ್ಥಳೀಯ ಸಗಟು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡದೆ, ಲಕ್ಷಾಂತರ ರೂ ಲಂಚ ನೀಡಿರುವ ಹಾಗೂ ಜ್ಯೇಷ್ಠತೆ ಹೊಂದಿಲ್ಲದವರಿಗೆ ಕಾನೂನು ಬಾಹಿರವಾಗಿ ಎಪಿಎಂಸಿಗೆ ಒಳಪಡದ ವಸ್ತುಗಳನ್ನು ಅಂದರೆ, ಚಿಲ್ಲರೆ ದಿನಸಿ ವ್ಯಾಪಾರಿಗಳಿಗೆ, ತಂಬಾಕು ಉತ್ಪನ್ನ ವ್ಯಾಪಾರಿಗಳಿಗೆ, ಪ್ಲಾಸ್ಟಿಕ್ ವ್ಯಾಪಾರಿಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ, ತಂಪು ಪಾನೀಯ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಎಪಿಎಂಸಿ ಕಾಯ್ದೆಯ ವ್ಯಾಪ್ತಿಗೆ ಒಳಪಡದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ದೂರಿದ್ದಾರೆ.
20.05.2025 ರಂದು ಮಾರುಕಟ್ಟೆ ಪ್ರಾಂಗಣದಲ್ಲಿ ಕೆಲವು ವರ್ತಕರುಗಳು ಅಧಿಸೂಚಿತ ಕೃಷಿ ಉತ್ಪನ್ನಗಳ ಉತ್ಪನ್ನಗಳನ್ನು ಮಾರಾಟ ಮಾಡದೆ, ಅಧಿಸೂಚಿತವಲ್ಲದ ವಸ್ತುಗಳನ್ನು ಮಾರುತ್ತಿದ್ದು,ಆ ಅಂಗಡಿಗಳನ್ನು ತೆರವುಗೊಳಿಸಲು 31.05.2025 ರ ವರೆಗೆ ಗಡುವು ನೀಡಲಾಗಿತ್ತು ಹಾಗೂ ಈ ವ್ಯಾಪಾರಿಗಳನ್ನು ಮುಖ್ಯ ಪ್ರಾಂಗಣದಿಂದ ಹೊರಗಡೆಗೆ ಸ್ಥಳಾಂತರಿಸಲು ಸೂಚಿಸಲಾಗಿತ್ತು.
ಆದರೂ ಇದುವರೆಗೆ ಯಾವುದೇ ಅಂಗಡಿಯನ್ನು ಅವರು ತೆರವುಗೊಳಿಸಿಲ್ಲ ಇದೇ ರೀತಿ ಕಳೆದ ವರ್ಷವೂ 16.11.2024 ರಂದು ಈ ವಿಚಾರವಾಗಿ ಆದೇಶವನ್ನು ಹೊರಡಿಸಿ, ತಿಳುವಳಿಕೆ ಪತ್ರವನ್ನು ಕಾರ್ಯದರ್ಶಿಗಳು ನೀಡಿದ್ದರೂ ಸಹ ಯಾರು ತೆರವುಗೊಳಿಸಿಲ್ಲ.
ಆದುದರಿಂದ ಈ ಕೂಡಲೇ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಂಡು ಅಧಿಸೂಚಿತವಲ್ಲದ ಉತ್ಪನ್ನಗಳನ್ನು ಶಾಶ್ವತವಾಗಿ ಕೃಷಿ ಮಾರುಕಟ್ಟೆ ಪ್ರಾಂಗಣ ದಿಂದ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
7 ದಿನಗಳ ಗಡುವನ್ನು ನೀಡುತ್ತಿದ್ದು ಅಷ್ಟ ರಲ್ಲಿ ಈ ಅಂಗಡಿಗಳು ತೆರವಾಗದಿದ್ದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಮುಂಬಾಗ ದೊಡ್ಡ ಮಟ್ಟದಲ್ಲಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ದಯಾನಂದ್ ಎಂವಿ, ಹನುಮಂತಯ್ಯ ಹಾಗೂ ವರಕೂಡು ಕೃಷ್ಣೇಗೌಡ ಎಚ್ಚರಿಸಿದರು.