ಬೆಂಗಳೂರು: ಆಂಧ್ರದ ಗಡಿಭಾಗದ ಜಿಲ್ಲೆಗಳ ತೋತಾಪುರಿ ಮಾವಿನಹಣ್ಣನ್ನು ಆಂಧ್ರ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಸಂಸ್ಕರಿಸಲು ಅನುವು ಮಾಡಿಕೊಡದ ಅಂದ್ರ ಪ್ರದೇಶ ರಾಜ್ಯ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.
ಆಪ್ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್ಯದಲ್ಲಿ ಆಂಧ್ರದ ಗುತ್ತಿಗೆದಾರರು ಇದುವರೆಗೂ ಲಕ್ಷಾಂತರ ಕೋಟಿ ರೂಪಾಯಿ ಗುತ್ತಿಗೆ, ರಿಯಲ್ ಎಸ್ಟೇಟ್ ಇನ್ನು ಮುಂತಾದ ವ್ಯವಹಾರವನ್ನು ಕನ್ನಡಿಗರ ಅಥವಾ ರಾಜ್ಯ ಸರ್ಕಾರದ ತೊಂದರೆಗಳಿಲ್ಲದೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಆದರೆ ರಾಜ್ಯದ ಬಡ ರೈತರು ಬೆಳೆದಿರುವ ತೋತಾಪುರಿ ಮಾವಿನ ಹಣ್ಣಿನ ಸಣ್ಣ ವ್ಯವಹಾರವನ್ನು ನಡೆಸಲು ವಿರೋಧ ವ್ಯಕ್ತಪಡಿಸುತ್ತಿರುವ ಕುಬ್ಜ ಮನಸ್ಥಿತಿಯ ಆಂಧ್ರ ಸರ್ಕಾರಕ್ಕೆ ಹಾಗೂ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ತಕ್ಕ ಪಾಠ ಕಲಿಸಬೇಕಾದರೆ ಕೂಡಲೇ ಕರ್ನಾಟಕ ಸರ್ಕಾರವು ಆಂಧ್ರದ ಗುತ್ತಿಗೆದಾರರನ್ನು ಹೊರಹಾಕಬೇಕು ಹಾಗೂ ಇಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಬಂದ್ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಆಗ್ರಹಿಸಿದರು.
ಕೇಂದ್ರದ ಅಲ್ಪಸಂಖ್ಯಾತ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಒಂದೇ ಕಾರಣಕ್ಕೆ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಹೊರಟಿರುವ ಆಂಧ್ರ ಸರ್ಕಾರದ ಈ ನಿರ್ಧಾರ ಕೇವಲ ಪತ್ರ ವ್ಯವಹಾರಗಳಿಂದ ಸಾಧ್ಯವಾಗುವುದಿಲ್ಲ. ಪಾಕಿಸ್ತಾನದ ಭಯೋತ್ಪಾದಕರಿಗೆ ಪಾಠ ಕಲಿಸಿದ ಆಪರೇಷನ್ ಸಿಂಧೂರ ಮಾದರಿಯ ರೀತಿಯಲ್ಲಿ ನಾವು ಸಹ ರಾಜ್ಯದಲ್ಲಿ ಆಂಧ್ರವಾಲಗಳನ್ನು ಹೊರದಬ್ಬ ಬೇಕು ಎಂದು ಸೀತಾರಾಮ ಗುಂಡಪ್ಪ ಕಿಡಿಕಾರಿದರು. ರಾಜ್ಯ ಬಿಜೆಪಿಗರು ಸಹ ಈ ಬಗ್ಗೆ ಧ್ವನಿ ಎತ್ತಬೇಕೆಂದು ಆಗ್ರಹಿಸಿದರು.