ಮೈಸೂರು: ಗ್ರಾಮ ಪಂಚಾಯಿತಿ ಅಮೃತ್
ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಪಂ ವ್ಯಾಪ್ತಿಯ ೩೨ ಗ್ರಾಮ ಪಂಚಾಯಿತಿಗಳ ಸಾಮಾಗ್ರಿ ಖರೀದಿಯಲ್ಲಿ
೭.೯೨ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.
ಸರ್ಕಾರ ಕೂಡಲೇ ಆಯಾ ಪಿಡಿಒ ಗಳನ್ನು ಅಮಾನತು ಪಡಿಸಿ ತನಿಖೆಗೆ ಆದೇಶಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮತ್ತು ಸಿಎಂ ಕಾರಿಗೂ ಘೇರಾವ್ ಮಾಡುವುದಾಗಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಪ್ರತಿಭಟನೆ ವೇಳೆ ಎಚ್ಚರಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿ.ಬಿ.ರಾಜಶೇಖರ್ ಅವರು ಮಾತನಾಡಿ, ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ೩೨ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿಗಳಿಗೆ ನಲಿ-ಕಲಿ ಸಾಮಗ್ರಿ, ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ ಹಾಗೂ ಲ್ಯಾಬ್ ಸಾಮಗ್ರಿ, ಡಿಜಿಟಲ್ ಗ್ರಂಥಾಲಯಗಳ ಸಾಮಗ್ರಿ, ಸೋಲಾರ್ ಬೀದಿ ದೀಪ,ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರವು ೭ ಕೋಟಿ ೯೨ ಲಕ್ಷ ರೂ, ಬಿಡುಗಡೆ ಮಾಡಿತ್ತು.ಆದರೆ ಖರೀದಿಯಲ್ಲಿ ಕೆಟಿಪಿಪಿ ನಿಯಮ ಪಾಲಿಸಿಲ್ಲ, ಎಲ್ಲ ಖರೀದಿಯಲ್ಲಿ ಭಾರಿ ಭಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಗ್ರಾಪಂ ಸದಸ್ಯ ಜಲೇಂದ್ರ ಅವರು ಒಂದು ವರ್ಷದ ಹಿಂದೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಯಾವುದೇ ತನಿಖೆಗೆ ಆದೇಶಿಸದೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕಿಡಿ ಕಾರಿದರು.
ಒಂದು ಗ್ರಾಪಂಗೆ ೨೪.೭೫ ಲಕ್ಷದಂತೆ ೩೨ ಗ್ರಾಪಂಗಳಿಗೆ ಒಟ್ಟು ೭ ಕೋಟಿ ೯೨ ಲಕ್ಷ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಹಲವು ಗ್ರಾಮ ಪಂಚಾಯಿತಿಗಳು ಒಂದೇ ಏಜೆನ್ಸಿಗೆ ಅನುಕೂಲವಾಗುವಂತೆ ಕೆಟಿಪಿಪಿ ನಿಯಮ ಉಲ್ಲಂಘಿಸಿ ಸಾಮಗ್ರಿ ಖರೀದಿ ಮಾಡಿವೆ.
ಒಂದೇ ಏಜೆನ್ಸಿಯಿಂದ ಒಂದೇ ವಸ್ತುವಿಗೆ ಬೇರೆ ಬೇರೆ ಗ್ರಾಪಂಗಳು ಬೇರೆ ಬೇರೆ ದರದಲ್ಲಿ, ಸಾಮಗ್ರಿ ಖರೀದಿ
ಮಾಡಿದ್ದಾರೆ.ಹೀಗೆ ಹಲವು ಗ್ರಾಪಂಗಳಲ್ಲಿ ಇ-ಟೆಂಡರ್ ನಲ್ಲಿ ಒಂದೇ ಏಜೆನ್ಸಿ ಭಾಗವಹಿಸಿ ಒಂದೇ ರೀತಿಯ ವಸ್ತುವಿಗೆ ಬೇರೆ,
ಬೇರೆ ದರ ನಿಗದಿ ಮಾಡಿ, ಖರೀದಿ ಮಾಡಿರುವ ಭಾರಿ ಅನುಮಾನ ಮೂಡಿದೆ ಎಂದು ದೂರಿದರು.
ಈ ಅಕ್ರಮದಲ್ಲಿ ಭಾಗವಹಿಸಿರುವ ೩೨ ಗ್ರಾಪಂಗಳ ಪಿಡಿಒ ಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆದಿದ್ದರೆ, ಇನ್ನು ಇಡೀ ರಾಜ್ಯದ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ ಶಿವಕುಮಾರ್, ಜಿಲ್ಲಾಧ್ಯಕ್ಷ ಸಂತೋಷ್,
ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜಿ., ಜಿಲ್ಲಾ, ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ, ಕರುನಾಡು ಲಾರಿ ಚಾಲಕರ
ಪರಿಷತ್ ಅಧ್ಯಕ್ಷರಾದ ಮಹದೇವಸ್ವಾಮಿ, ಹೋರಾಟಗಾರ ಡಿಪಿಕೆ ಪರಮೇಶ್, ದೂರುದಾರ ಜಲೇಂದ್ರ, ಶಿವಕುಮಾರ್ ಸಿಂಧುವಳ್ಳಿ, ಹರೀಶ್, ಕಿರಣ್, ದಿಲೀಪ್,
ಶ್ರೀನಿವಾಸ್, ಮಾಲಿನಿ, ಭಾಗ್ಯ, ಮಹೇಂದ್ರ, ರವಿ ಗೌಡ, ವರಕೋಡು ಕೃಷ್ಣಗೌಡ, ಮನುಗೌಡ, ಅನುರಾಜ್,
ಗೌತಮ್, ಕನ್ನಡಾಂಬೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಪ್ರತಿಭಟನೆ ನಂತರ ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶೀಘ್ರ ತನಿಖೆಗೆ ಆದೇಶ:
ಮೈಸೂರು ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಅಮೃತ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ದೂರು ನೀಡಿದೆ. ಈ ಬಗ್ಗೆ ಅರ್ಜಿ ಪರಿಶೀಲಿಸಿ ಶೀಘ್ರದಲ್ಲೆ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಭರವಸೆ ನೀಡಿದ್ದಾರೆ.