ಗಿಡಗಳ ನೆಟ್ಟು, ಸಿಹಿ ವಿತರಿಸಿ ಅಮಿತ್ ಶಾ ಹುಟ್ಟುಹಬ್ಬ ಆಚರಣೆ

Spread the love

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ವತಿಯಿಂದ‌ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ರಾಮಕೃಷ್ಣನಗರ ಹೆಚ್ ಬ್ಲಾಕ್ ನಮೋ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು, ಸಿಹಿ ವಿತರಿಸಿ ಅಮಿತ್ ಶಾ ಅವರ ಜನುಮದಿನ ಆಚರಿಸಲಾಯಿತು.

ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ ಭಾರತದ ರಾಜಕೀಯದಲ್ಲಿ ಚುನಾವಣಾ ಚಾಣಕ್ಯ ಎಂದೇ ಹೆಸರುವಾಸಿಯಾಗಿರುವ ಅಮಿತ್ ಶಾ ಅವರು ದೇಶದಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ರೂಪಿಸುವಲ್ಲಿ ಶ್ರಮಿಸಿದವರು ಎಂದು ಬಣ್ಣಿಸಿದರು.

ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಬಲಪಡಿಸಿ, ಅನೇಕ ರಾಜ್ಯಗಳಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಪಾತ್ರ ವಹಿಸಿದವರು. ಹಾಗಾಗಿಯೇ ಕಾರ್ಯಕರ್ತರಿಗೆ ಅಚ್ಚು ಮೆಚ್ಚಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವರಾಗಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು, ಕಲ್ಲು ತೂರುತ್ತಿದ್ದ ಜನರ ಕೈಯಲ್ಲಿ ಪುಸ್ತಕ ಹಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ರಾಷ್ಟ್ರೀಯ ತನಿಖಾ ದಳ ಬಲ ಪಡಿಸಿ ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸಿದರು. ಜೊತೆಗೆ ನೆರೆ ದೇಶಗಳ ಅಲ್ಪಸಂಖ್ಯಾತರಿಗೂ ಭಾರತದ ನಾಗರೀಕತೆ ನೀಡುವ ಕಾನೂನು ತಂದರು, ಭಾರತದ ಅಭಿವೃದ್ಧಿಗೆ ಅಮಿತ್ ಶಾ ಅನೇಕ ಕೊಡುಗೆ ನೀಡಿದ್ದಾರೆ ಎಂದು ರಾಕೇಶ್‌ ಭಟ್ ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಉಪಾಧ್ಯಕ್ಷ ಶಿವು ಪಟೇಲ್, ಬಿ.ಸಿ. ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ಎಸ್.ಟಿ ಮೋರ್ಚಾ ನಗರ ಉಪಾಧ್ಯಕ್ಷ ಎಸ್ ತ್ಯಾಗರಾಜ್, ಎಸ್.ಟಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮಹೇಶ್ ಕುಮಾರ್, ಸಿ.ಲೋಕೇಶ್, ಯುವ ಮೋರ್ಚಾ ಉಪಾಧ್ಯಕ್ಷರಾದ ಸಿ. ರಾಘವೇಂದ್ರ, ಸಿ.ಎಸ್. ಮಧು, ಜೀವ ಗೌಡ, ಮುಖಂಡರಾದ ಎಸ್. ಮಧು, ದೇವರಾಜ್, ರಾಮಕೃಷ್ಣಪ್ಪ, ಕಾಂತರಾಜ ಅರಸ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.