ವಚನಗಳ ಮೂಲಕ ಬೆಳಕು ಚೆಲ್ಲಿದವರು ಅಂಬಿಗರ ಚೌಡಯ್ಯ:ಟಿ.ಎಸ್. ಶ್ರೀ ವತ್ಸ

Spread the love

ಮೈಸೂರು: ಮನುಷ್ಯರ ನಡುವೆ ಇದ್ದ ತಾರತಮ್ಯವನ್ನು ತೊಡೆದುಹಾಕಿ ತಮ್ಮ ವಚನಗಳ ಮೂಲಕ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ ಎಂದು ಶಾಸಕ ಟಿ.ಎಸ್. ಶ್ರೀ ವತ್ಸ ಬಣ್ಣಿಸಿದರು.

ಇಂತಹ ವಚನಕಾರರ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮoದಿರಲ್ಲಿ ಹಮ್ಮಿಕೊಂಡಿದ್ದ, ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವ ಮಂಟಪದ ಸುತ್ತ ನದಿ, ಹೊಳೆ ಏನು ಇಲ್ಲ ಹೇಗೆ ನೀವು ಅಂಬಿಗರ ವೃತ್ತಿಯನ್ನು ಮಾಡುತ್ತೀರಾ ಎಂದು ಕೇಳಿದಾಗ ಮಾನವ ಎಂಬ ಸಂಪನ್ಮೂಲ ಏನಿದೆ ಅದರ ಹೊಳೆಯಲ್ಲಿ ಮನುಷ್ಯರ ನಡುವೆ ತಾರತಮ್ಯ ಹೊಡೆದು ಹಾಕಿ ಅವರೆಲ್ಲರನ್ನೂ ದಡ ಸೇರಿಸುತ್ತೇನೆ. ಅವರಲ್ಲಿ ಸಮಾಜ ಶೋಷಣೆಗೆ ಒಳಗಾದ ಮನುಷ್ಯರನ್ನು ಮೇಲೆತ್ತುವ ಕಾಯಕವೇ ನನ್ನ ಅಂಬಿಗನ ವೃತ್ತಿ ಎಂಬ ವಿಚಾರವನ್ನು ಅವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅನುಭವ ಮಂಟಪವನ್ನು ಮೊದಲ ಪಾರ್ಲಿಮೆಂಟ್ ಎಂದು ಕರೆಯುತ್ತೇವೆ. ಅನುಭವ ಮಂಟಪದ ಚಿತ್ರಣವನ್ನು ವಿಧಾನಸಭೆಯಲ್ಲಿ ಸ್ಪೀಕರ್ ಅವರು ಅನಾವರಣ ಮಾಡಿರುವುದು ಶ್ಲಾಘನೀಯ ಎಂದು ಶ್ರೀವತ್ಸ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬಿಗರ ಚೌಡಯ್ಯ ನವರ ವಚನವನ್ನು ಶುಭಕಾರ್ಯಗಳಲ್ಲಿ ಹೇಳುತ್ತಾ ಹೆಚ್ಚಿನ ಪ್ರಚಾರಕ್ಕೆ ಒಳಪಡಿಸುತ್ತ ಪ್ರಸ್ತುತದಲ್ಲಿಯೂ ಉಳಿದುಕೊಳ್ಳುವಂತೆ ಮಾಡಿದವರು ಅವರ ಮಗ ಎಂದು ಹೇಳಿದರು. ಜೊತೆಗೆ ನಮ್ಮೆಲ್ಲರಿಗೂ ಈ ಕಾಲದಲ್ಲಿಯೂ ಸಹ ಬೆಳಕನ್ನು ಚೆಲ್ಲುತ್ತ ಇರುವುದು ಅಂಬಿಗ ಚೌಡಯ್ಯ ನವರ ವಚನಗಳು ಎಂದು ತಿಳಿಸಿದರು.

ಮಹಾರಾಜ ಕಾಲೇಜಿನ, ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಆರ್.ಎನ್. ಪದ್ಮನಾಭ ಅವರು ಮಾತನಾಡಿ ಅಂಬಿಗರ ಚೌಡಯ್ಯ ದೈತ್ಯ ಪ್ರತಿಭೆ, ಮಹಾಯೋಗಿ, ಭಾರತ ದರ್ಶನದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತ ಕವಿ, ಅವರ ಅನುಭವದಿಂದ ಸತ್ಯವನ್ನು ತಿಳಿಸಿದ ಮಹಾಪುರುಷ, ಮಹಾಹರಿಕಾರ, ಕ್ರಾಂತಿಕಾರಿ ಚಿಂತಕ, ಎಲ್ಲದಕ್ಕಿಂತ ಮಿಗಿಲಾಗಿ ಇವರು ಸಮಾಜ ಸುಧಾರಕರು ಹಾಗೂ ನೇರ ನುಡಿಯನ್ನು ಹೊಂದಿದ್ದವರು. ಇಂತಹವರು ನಿಜವಾಗಿಯೂ ನಮ್ಮೆಲ್ಲರ ಬದುಕಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಇವರು ಏಕದೇವೋ ಉಪಸಕರಾಗಿದ್ದರು. ಶಿವನಲ್ಲಿ ದೇವರನ್ನು ನೆನೆದು ಹಸಿವನ್ನು ಮುಚ್ಚಿ, ಜನರನ್ನು ಗೌರವಿಸಿ ನಡೆದುಕೊಂಡರೆ ಮೋಕ್ಷ ಸಾಧ್ಯ ಎಂಬ ಮಾತನ್ನು 12 ನೇ ಶತಮಾನದಲ್ಲೇ ನಮಗೆ ಹೇಳಿದ್ದಾರೆ. 12 ನೇ ಶತಮಾನದಲ್ಲಿ ಹೇಳಿದ ಮಾತನ್ನು 21ನೇ ಶತಮಾನದಲ್ಲಿ ವೈಭವೀಕರಿಸಿ ನೋಡುತ್ತಿದ್ದೇವೆ ಎಂದರೇ ಅದು ಅವರು ಹೇಳಿದ ಮಾತು, ಮಾಡಿಕೊಂಡು ಬಂದ ಕೆಲಸ, ನಡೆದುಕೊಂಡು ಬಂದ ವಿಚಾರಗಳಿಗೆ ಎಷ್ಟು ಬೆಲೆ ಇದೆ ಇದನ್ನು ಕೇಳುತ್ತಿರುವ ನಾವೇ ಪುಣ್ಯವಂತರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್, ಮುಖಂಡರಾದ ರಂಗಸ್ವಾಮಿ ಹಾಗೂ ಅಂಬಿಗರ ಚೌಡಯ್ಯ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.