ಮೈಸೂರು: ವಿವಿಧ ಭಾಷೆ, ವಿವಿಧ ಜನಾಂಗ ಹಾಗೂ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಭಾರತದ ನೆಲಕ್ಕೆ ಮತ್ತು ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶ ಹಾಗೂ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ ಎಂದು
ಕಲ್ಯಾಣ ಶ್ರೀ ಬಂತೇಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 68 ನೇ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಬಾ ಸಾಹೇಬರರ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಬೆಲೆಕೊಡಬೇಕು. ನಮ್ಮ ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇದೆ,ನಗರದ ಜೀವನಕ್ಕೆ ಒಗ್ಗಿಕೊಂಡು ಸಾಮಾಜಿಕ ವ್ಯವಸ್ಥೆ ಸುಧಾರಣೆ ಕಂಡಿದ್ದರೂ ಸಹ ಮಾನಸಿಕ ವ್ಯವಸ್ಥೆ ಸುಧಾರಣೆ ಗೊಂಡಿಲ್ಲ. ಎಲ್ಲಿಯವರೆಗೂ ಜಾತಿ ಹಾಗೂ ತಾರತಮ್ಯ ಹೋಗುವುದಿಲ್ಲವೋ, ನಮ್ಮಲ್ಲಿ ಮಾನವೀಯ ಗುಣಗಳು ಬರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನಿಜವಾದ ಸ್ವತಂತ್ರ ಸಿಗುವುದಿಲ್ಲ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಸ್ವತಂತ್ರವನ್ನು ಇನ್ನೂ ಪಡೆದಿಲ್ಲ. ಅದು ಸಿಗಬೇಕೆಂದರೆ ಭಾರತೀಯರೆಲ್ಲರೂ ಸಹೋದರತೆಯಿಂದ ಬದುಕಬೇಕು. ಯಾವುದೇ ವ್ಯಕ್ತಿಯನ್ನು ಜಾತಿ -ಧರ್ಮ ಹಾಗೂ ವರ್ಣದಿಂದ ಅಳೆಯದೆ. ಪ್ರೀತಿಯಿಂದ ಭ್ರಾತೃತ್ವ ಭಾವನೆಯಿಂದ ಕಾಣಬೇಕೆಂಬುದೇ ಅಂಬೇಡ್ಕರ್ ಅವರ ಆಶಯ. ಇಂದು ಪ್ರಪಂಚದಾದ್ಯಂತ ಸುಭಧ್ರವಾಗಿ ನಿಂತಿರುವ ಅವರ ಪರಿಪೂರ್ಣವಾದ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಬುದ್ಧ ಎಂಬ ಸುಜ್ಞಾನ ಸಾಗರಕ್ಕೆ ಮಹಾ ನದಿಯಾಗಿರುವುದು ಬಾಬಾ ಸಾಹೇಬರು, ಅವರೊಂದಿಗೆ ನಾವು ಉಪ ನದಿಗಳಾಗಿ ಸೇರಿ,ಪ್ರಬುದ್ಧ ಸಂವಿಧಾನವನ್ನು ಅನುಸರಿಸೋಣ ಎಂದು ಡಾ. ಕಲ್ಯಾಣ ಶ್ರೀ ಬಂತೇಜಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಕಲ್ಯಾಣ ಶ್ರೀ ಬಂತೇಜಿ ಹಾಗೂ ಭೋದಿ ರತ್ನ ಬಂತೇಜಿ ಅವರು ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆಯನ್ನು ಬೋಧಿಸಿದರು.
ಟೌನ್ ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.