ಅಂಬೇಡ್ಕರ್‌ ಚಿಂತನೆಗಳನ್ನು ಎಲ್ಲರೂ ಪಾಲಿಸೋಣ: ರಮೇಶ್‌ ಬಂಡಿಸಿದ್ದೇಗೌಡ

Spread the love

ಮೈಸೂರು: ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಚಿಂತನೆಗಳನ್ನು ನಾವೆಲ್ಲಾ ಜೀವನದಲ್ಲಿ ಪಾಲಿಸೋಣ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಅಧ್ಯಕ್ಷರಾದ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರರು ಮಾತನಾಡಿದರು.

ದೇಶದ ಜನರಿಗೆ ಭದ್ರ ಬುನಾದಿ ಹಾಕಿಕೊಡಲು ಪ್ರಪಂಚದಾದ್ಯಂತ ಸಂಚರಿಸಿ, ಅಪಾರವಾದ ಅಧ್ಯಯನ ನಡೆಸಿದ ಅಂಬೇಡ್ಕರ್‌ ಅವರು ಭಾರತೀಯರಿಗೆ ಶ್ರೇಷ್ಠ ಸಂವಿಧಾನ ನೀಡಿದರು. ಆ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ, ವಾಕ್ ಸ್ವಾತಂತ್ರ್ಯ ಕಲ್ಪಿಸಿದ್ದಾರೆ. ಅಂಬೇಡ್ಕರ್‌ ಅವರ ದೀರ್ಘಕಾಲದ ಅಧ್ಯಯನ, ಅನೇಕ ವಿಚಾರಗಳು ಇಂದಿಗೂ ಜೀವಂತವಾಗಿದ್ದು, ಅವರ ಚಿಂತನೆಗಳು, ವಿಚಾರಗಳನ್ನು ನಾವುಗಳು ಜೀವನದಲ್ಲಿ ಪಾಲನೆ ಮಾಡಬೇಕಿದೆ ಎಂದು ಹೇಳಿದರು.

ಸೆಸ್ಕ್‌ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಇಡೀ ವಿಶ್ವವೇ ಮೆಚ್ಚುವ ಶ್ರೇಷ್ಠ ಸಂವಿಧಾನವನ್ನು ಭಾರತೀಯರಿಗೆ ನೀಡಿದ್ದಾರೆ. ಅಂಬೇಡ್ಕರ್‌ ಅವರು ಭಾರತ ಕಂಡ ಅತ್ಯುನ್ನತ ಹಾಗೂ ಮಾನವರಿಗೆ ಸಮಾನತೆ ನೀಡಿದ ದೈವಿ ಪುರುಷರಾಗಿದ್ದು, ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿಯೂ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ ಶಾಖೆ) ಶರಣಮ್ಮ ಎಸ್‌. ಜಂಗಿನ್‌, ಪ್ರಧಾನ ವ್ಯವಸ್ಥಾಪಕರು(ಆ ಮತ್ತು ಮಾ. ಸಂ) ಬಿ.ಆರ್. ರೂಪ‌, ಮುಖ್ಯ ಪ್ರಧಾನ ವ್ಯವಸ್ಥಾಪಕರು(ಆಂತರಿಕ ಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರು(ಖರೀದಿ) ಎಲ್‌. ಲೋಕೇಶ್‌ ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.