ಥಿಯೇಟರ್ ನಲ್ಲಿ ಮಹಿಳೆ ಸಾವು ಪ್ರಕರಣ:ಅಲ್ಲು ಅರ್ಜುನ್ ವಿಚಾರಣೆಗೆ ಹಾಜರು

Spread the love

ಹೈದರಾಬಾದ್: ಡಿಸೆಂಬರ್ 4 ರಂದು ಪುಷ್ಪಾ-2 ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣ ಸಂಬಂಧ ಖ್ಯಾತ ನಟ ಅಲ್ಲು ಅರ್ಜುನ್ ಚಿಕ್ಕಡಪಲ್ಲಿ ಪೊಲೀಸರ ಮುಂದೆ ಹಾಜರಾಗಿ ‌ವಿಚಾರಣೆ ಎದುರಿಸಿದರು.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು,ಅದರಂತೆ ಅಲ್ಲು ಅರ್ಜುನ್ ವಿಚಾರಣೆಗೆ ಹಾಜರಾದರು.

ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಮೃತಪಟ್ಟಿದ್ದರು. ಅವರ ಎಂಟು ವರ್ಷದ ಮಗ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ನಂತರ, ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಡಿಸೆಂಬರ್ 13 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ಅವರಿಗೆ ತೆಲಂಗಾಣ ಹೈಕೋರ್ಟ್ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬಿಡುಗಡೆಗೂ ಮುನ್ನ ಚಂಚಲಗುಡ ಜೈಲಿನಲ್ಲಿ ರಾತ್ರಿಯನ್ನು ಕಳೆದಿದ್ದರು. ಜೈಲಿನಿಂದ ಹೊರಬಂದ ಬಳಿಕ ಅಲ್ಲು ಅರ್ಜುನ್ ಅವರು ತನಿಖೆಗೆ ಸಹಕರಿಸುವುದಾಗಿ ಹೇಳಿದ್ದರು.

ಈ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ನಟನ ಬೆಂಬಲಿಗರು ಮಹಿಳೆಯ ಸಾವು ಸಂಪೂರ್ಣವಾಗಿ ಅಪಘಾತ ಎಂದು ಹೇಳಿದರೆ, ಅಧಿಕಾರಿಗಳು ಅರ್ಜುನ್ ಮತ್ತು ಅವರ ತಂಡದ ಬೇಜವಾಬ್ದಾರಿ ಎಂದು ದೂರಿದ್ದಾರೆ.