ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕ ಅನುಚಿತ ವರ್ತನೆ: ಡಿಪೋ ಮ್ಯಾನೇಜರ್ ಗೆ ದೂರು

Spread the love

ಮೈಸೂರು: ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.

ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ KA59 F 0879 ನ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ದ ದೂರು ನೀಡಲಾಗಿದೆ.

ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ ಆಕೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಡಿ.20ರಂದು ಸರ್ಕಾರಿ ಬಸ್ ಹೆಡಿಯಾಲ ಸಮೀಪ ನಿಳಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಸಾಗಿದೆ.ಬಸ್ ಗೆ ಕಾದಿದ್ದ ಶಾಲೆ ಸಿಬ್ಬಂದಿ ನಾಗಮ್ಮ ಅವರು ನಿಲ್ಲಿಸುವಂತೆ ಕೈ ತೋರಿಸಿದ್ದಾರೆ.

ಚಾಲಕ ಸ್ವಲ್ಪದೂರ ಸಾಗಿ ಬಸ್ ನಿಲ್ಲಿಸಿದ್ದಾನೆ.ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಎಂದು ಪರಿಗಣಿಸದೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾನೆ.

ಬಸ್ ನಿಂತ ಮೇಲೆ ನಾಗಮ್ಮ ಅವರ ಫೋಟೋ ಮತ್ತು ವಿಡಿಯೋ ಗಳನ್ನ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.ಈ ವಿಚಾರವನ್ನ ನಾಗಮ್ಮ ತಮ್ಮ ಪತಿ ಮಹದೇವಸ್ವಾಮಿಗೆ ತಿಳಿಸಿದ್ದಾರೆ.

ಕೂಡಲೇ ಸಂಘಟಕರ ನೆರವಿನಿಂದ ಮಹದೇವಸ್ವಾಮಿ ನಂಜನಗೂಡು ಘಟಕದ ಬಸ್ ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.

ಡಿಪೋ ಮ್ಯಾನೇಜರ್‌ ಅವರು ಮಂಜುನಾಥ್ ಮೊಬೈಲ್ ವಶಕ್ಕೆ ಪಡೆದಿದ್ದು,ಪರಿಶೀಲಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.