ಬೆಳ್ತಂಗಡಿ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪ ಸ್ವಾಮಿ ರಕ್ಷಣೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ ಎಂದು
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಸತ್ಯದ ಸಾಕ್ಷಾತ್ಕಾರವಾಗುತ್ತಿದೆ, ಜೊತೆಗೆ ಶಾಂತಿ, ನೆಮ್ಮದಿಯೂ ದೊರಕಿದೆ. ಅಲ್ಲದೆ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನಮಗೆ ಎಲ್ಲಾ ಸೇವಾಕಾರ್ಯಗಳನ್ನು ಮುಂದುವರಿಸಲು ನವಚೈತನ್ಯ ಮೂಡಿಬಂದಿದೆ ಎಂದು ಹೇಳಿದರು.
ಶುಕ್ರವಾರ ಧರ್ಮಸ್ಥಳದಲ್ಲಿ ನಡೆದ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಧರ್ಮಾಧಿಕಾರಿಯಾಗಿ ಹೆಗ್ಗಡೆ ಪೀಠವನ್ನು ಬಯಸಿದವನಲ್ಲ. ಆದರೆ ಅನಿರೀಕ್ಷಿತವಾಗಿ ತೀರ್ಥರೂಪರ ನಿಧನದಿಂದ ನಾನು ಪಟ್ಟವನ್ನು ಸ್ವೀಕರಿಸಬೇಕಾಯಿತು. ಇಲ್ಲಿ ನಾನು “ನೆಪ” ಮಾತ್ರ. ಎಲ್ಲಾ ಕಾರ್ಯಗಳೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ, ಧರ್ಮದೇವತೆಗಳ ಆಶಯದಂತೆ ಹಾಗೂ ಅಣ್ಣಪ್ಪ ಸ್ವಾಮಿಯ ರಕ್ಷಣೆಯಿಂದ ಸುಗಮವಾಗಿ ನಡೆಯುತ್ತವೆ ಎಂದು ತಿಳಿಸಿದರು.
ಪ್ರತೀ ಸಂಕ್ರಮಣದ ದಿನ ನಾನು ಧರ್ಮದೇವತೆಗಳಿಗೆ ವರದಿ ಒಪ್ಪಿಸಬೇಕು. ಆಗ ಅವರು, ತಿಳುವಳಿಕೆ ಇಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇದೆ. ಏನೇ ಆಪತ್ತು, ವಿಪತ್ತು ಬಂದರೂ ಹೆತ್ತ ತಾಯಿಯಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಅಭಯ ನೀಡುತ್ತಾರೆ. ಏನಾದರು ತಪ್ಪಾದಲ್ಲಿ ಕೈಯ ಎಣ್ಣೆ ಕಣ್ಣಿಗೆ ತಾಗಿದಂತೆ ಆಗಬಹುದು ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ ಎಂದು ತಿಳಿಸಿದರು.
ತಮಗೆ ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕ ಆದಾಗ ಆರಂಭದಲ್ಲಿಯೂ ಅನೇಕ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಕುಟುಂಬದ ಎಲ್ಲಾ ಸದಸ್ಯರ ಸಹಕಾರ, ನೌಕರವೃಂದದವರ ಕರ್ತವ್ಯ ನಿಷ್ಠೆ ಹಾಗೂ ಊರಿನ ನಾಗರಿಕರು ಮತ್ತು ಕ್ಷೇತ್ರದ ಅಭಿಮಾನಿಗಳ ಸಹಕಾರದಿಂದ ಎಲ್ಲಾ ಸಮಸ್ಯೆಗಳು ಸುಗಮವಾಗಿ ನಿವಾರಣೆಯಾಗಿವೆ ಎಂದು ಹೆಗ್ಗಡೆ ಯವರು ಹೇಳಿದರು.
ಬಾರ್ಕೂರಿನ ಹಿರಿಯ ವಿದ್ವಾಂಸರಾದ ದಾಮೋದರ ಶರ್ಮ ಮಾತನಾಡಿ
ಧರ್ಮಸ್ಥಳದ ದಾನ ಪರಂಪರೆ, ಸಮಾಜಮುಖಿ ಸೇವಾ ಕಾರ್ಯಗಳು ವಿಶ್ವಮಾನ್ಯವಾಗಿವೆ. ಹಾಗಾಗಿ ಹೆಗ್ಗಡೆಯವರು ದೇವರು ಮತ್ತು ಮನುಷ್ಯರ ಸೇವೆ ಮಾಡಿ “ದೇವಮಾನವ” ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟರು ಮಾತನಾಡಿ, ಮುನಿಗಳಂತೆ ಮೌನದಿಂದ ಹೆಗ್ಗಡೆಯವರು ಎಲ್ಲವನ್ನೂ ಜಯಿಸಿದ್ದಾರೆ. ಮೌನದಿಂದ ತನ್ನನ್ನು ತಾನು ತಿಳಿದುಕೊಳ್ಳುವವರಿಗೆ “ಮುನಿ” ಎನ್ನುತ್ತಾರೆ. ಹೆಗ್ಗಡೆಯವರು ಮುನಿಯಂತೆ ಎಲ್ಲವನ್ನೂ ಹಾಗೂ ಎಲ್ಲರನ್ನೂ ಗೆದ್ದಿದ್ದಾರೆ ಎಂದು ತಿಳಿಸಿದರು.
ವಿದ್ವಾನ್ ನಾಗೇಂದ್ರ ಭಾರದ್ವಾಜ ಮಾತನಾಡಿ ಯಾವುದನ್ನೂ ಕಳೆದುಕೊಳ್ಳುವುದು ಸುಲಭ. ಆದರೆ, ಅದನ್ನು ಪಡೆಯುವುದು ಕಷ್ಟ. ಎಲ್ಲಾ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಹೆಗ್ಗಡೆಯವರು ಪ್ರಸಾದರೂಪವಾಗಿ ಧರ್ಮಸ್ಥಳದಿಂದ ಪ್ರಥಮ ದಾನವನ್ನು ನೀಡಿ ಪೋತ್ಸಾಹಿಸುತ್ತಾರೆ ಎಂದು ತಿಳಿಸಿದರು.
ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್,ಕಟೀಲು ದೇವಸ್ಥಾನದ ಲಕ್ಷ್ಮೀನಾರಾಯಣ ಅಸ್ರಣ್ಣ ಮತ್ತಿತರರು ಮಾತನಾಡಿದರು.
ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಸೋನಿಯಾವರ್ಮ ಉಪಸ್ಥಿತರಿದ್ದರು.
ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಧಾರ್ಮಿ ಕ್ಷೇತ್ರಗಳು, ದೈವಸ್ಥಾನಗಳು ಮತ್ತು ಶ್ರದ್ಧಾಕೇಂದ್ರಗಳ ಮುಖಂಡರು ಹಾಗೂ ಧಾರ್ಮಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಸುಮಾರು ಆರು ಸಾವಿರ ಮಂದಿ ಸಭಾಸದರು ಉಪಸ್ಥಿತರಿದ್ದರು.