ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ:ಕನ್ನಡ ಜ್ಯೋತಿ ರಥಕ್ಕೆ ಸಿದ್ದಾಪುರದಲ್ಲಿ ಅದ್ದೂರಿ ಸ್ವಾಗತ

Spread the love

ಅರಕಲಗೂಡು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ನಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ಅಕ್ಕರೆಯಿಂದ ಆಯೋಜಿಸಲಾಗಿದ್ದು ಈಗಾಗಲೇ ಸಮ್ಮೇಳನದ ಜ್ಯೋತಿ ರಥ ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಗಳಲ್ಲೂ ಸಂಚರಿಸುತ್ತಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥ ಅರಕಲಗೂಡು ತಾಲೂಕು ಕೊಣನೂರು ಹೋಬಳಿಯ ಗಡಿಭಾಗ ಸಿದ್ದಾಪುರ ಗೇಟ್ ಬಳಿ ಬಂದಾಗ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು.

ಸುವರ್ಣ ಕರ್ನಾಟಕ ರಕ್ಷಣಾ ಸೇನೆ‌ ಸಂಸ್ಥಾಪಕರೂ‌ ಹಾಗೂ ರಾಜ್ಯಾಧ್ಯಕ್ಷ ಡಾ.ಎಸ್. ರಾಘವೇಂದ್ರ ಗೌಡರ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಸಿದ್ದಾಪುರ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ರಥವನ್ನು ಸಂಭ್ರಮದಿಂದ ಸ್ವಾಗತಿಸಿದರು.

ಈ ವೇಳೆ ಹಾಸನ ಜಿಲ್ಲಾಡಳಿತ, ಜಿಲ್ಲಾ ಸಾಹಿತ್ಯ ಪರಿಷತ್, ತಾಲೂಕು ಆಡಳಿತ ತಾಲೂಕು ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿಮಾನಿಗಳು ಸೇರಿದಂತೆ ಎಲ್ಲರೂ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್ ಗೌಡ ಅವರು ಮಾತನಾಡಿ ಡಿಸೆಂಬರ್ 20 ರಿಂದ 3 ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಹಾಗಾಗಿ ಕನ್ನಡ ಜೋತಿರಥ ರಾಜ್ಯಾದ್ಯಂತ ಸಂಚರಿಸುತ್ತಿದೆ ಈ ಮೂಲಕ ಸಮ್ಮೇಳನದ ಕುರಿತು ಪ್ರಚಾರ ಮಾಡಲಾಗುತ್ತಿದೆ ನಮ್ಮ ಜಿಲ್ಲೆಯ ಎಲ್ಲಾ ಕನ್ನಡ ಅಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.