ಮೈಸೂರು: ಜನನವಾದ ಮೇಲೆ ಮರಣ ನಿಶ್ಚಿತ, ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು,ಅಂತಹ ಬದುಕು ಪುನೀತ್ ರಾಜ್‌ಕುಮಾರ್ ಅವರದ್ದಾಗಿತ್ತು ಎಂದು ಖ್ಯಾತ ವೈದ್ಯರಾದ ಡಾಕ್ಟರ್ ಎಸ್ ಪಿ ಯೋಗಣ್ಣ ತಿಳಿಸಿದರು.
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ವರನಟ ಡಾಕ್ಟರ್ ರಾಜಕುಮಾರ್ ಅವರ ಪ್ರತಿಮೆ ಮುಂಭಾಗ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ರವರ 4ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಂತರ ಅಭಿಮಾನಿಗಳಿಗೆ ಅನ್ನದಾನ ನೆರವೇರಿಸಿದ ವೇಳೆ ಡಾಕ್ಟರ್ ಎಸ್ ಪಿ ಯೋಗಣ್ಣ ಮಾತನಾಡಿದರು.
ಶ್ರೀಮಂತಿಕೆ, ಜೀವಿತಾವಧಿ ಮುಖ್ಯವಲ್ಲ, ಹೇಗೆ ಬದುಕಿದ್ದರು ಎಂಬುದೇ ಮುಖ್ಯ, ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕ ಬದುಕಾಗುತ್ತದೆ,ಬದುಕಿನ ದಿನಗಳಲ್ಲಿ ಪುನೀತ್ ಸಾವಿರಾರು ಜನರಿಗೆ ಆಸರೆಯಾಗಿದ್ದರು, ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧ ವಿಲ್ಲದವರು ಕೂಡ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ ಎಂದು ಬಣ್ಣಿಸಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ ಅವರು ಮಾತನಾಡಿ,ಸರಳತೆ ಮತ್ತು ಪರೋಪ ಕಾರ ಗುಣಗಳನ್ನು ಅಳವಡಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದ ಪುನೀತ್ ರಾಜ್‍ಕುಮಾರ್ ಮಾನವೀಯ ಮೌಲ್ಯಗಳ ಗಣಿ ಆಗಿದ್ದರು ಎಂದು ಹೇಳಿದರು.
ಪುನೀತ್ ಮರೆಯಾದ ನಂತರದ ದಿನಗಳಲ್ಲಿ ಅವರು ಮಾಡಿದ ಸಾಮಾಜಿಕ ಸೇವೆಯ ಬಗ್ಗೆ ಎಲ್ಲರಿಗೂ ತಿಳಿಯಿತು. ಅವರು ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿಯಾಗಿದೆ. ಅಪ್ಪು ಮರಣದ ನಂತರವೂ ಜೀವಂತವಾಗಿದ್ದಾರೆ. ಪ್ರಚಾರ ಇಲ್ಲದೆ ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸುತ್ತಿದ್ದ ಅವರ ಗುಣ ಚಿರಸ್ಮರಣೀಯ ಎಂದು ಹೇಳಿದರು.
ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು, ಜಿ ರಾಘವೇಂದ್ರ, ಕಿಶೋರ್ ಕುಮಾರ್, ಎಲ್ ಐ ಸಿ ಬಾಲು, ಶೇಖರ್, ಕಿರಣ್, ಮಂಜುನಾಥ್ ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಷಣ್ಮುಗನ್, ಮಾಯಣ್ಣ, ನಟರಾಜ್, ನಾಗರಾಜ್, ಮಲ್ಲೇಶ್, ಸತೀಶ್, ಲಕ್ಷ್ಮಣ,ಮತ್ತಿತರರು ಹಾಜರಿದ್ದರು.

