ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್ ಅರಸ್ ನಿಧನ

Spread the love

ಬೆಂಗಳೂರು: ನಟಿ ಅಮೂಲ್ಯ ಅವರ ಸಹೋದರ ಹಾಗೂ ನಿರ್ದೇಶಕ ದೀಪಕ್ ಅರಸ್ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದಾಗಿ ದೀಪಕ್ ಅರಸ್‌ ಅವರು ನಿಧನರಾಗಿದ್ದಾರೆ. ದೀಪಕ್ ಅರಸ್ ಅವರಿಗೆ ಕಿಡ್ನಿ ತೊಂದರೆ ಇದ್ದುದರಿಂದ ಡಯಾಲಿಸಿಸ್ ಕೂಡ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ.

ದೀಪಕ್ ಅರಸ್‌ ಅವರಿಗೆ 42 ವರ್ಷಗಳಾಗಿತ್ತು,ಶುಕ್ರವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಅಮೂಲ್ಯ ಬಾಲನಟಿ, ನಾಯಕಿಯಾಗಿ ಪ್ರಸಿದ್ದರಾಗಿದ್ದರೆ, ಅವರ ಸಹೋದರ ದೀಪಕ್ ಅರಸ್‌ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು, ಕನ್ನಡದ ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳಿಗೆ ದೀಪಕ್ ಅರಸ್‌ ಆಕ್ಷನ್ ಕಟ್ ಹೇಳಿದ್ದರು.

ಸಹೋದರ ದೀಪಕ್ ಅರಸ್ ನಿಧನದ ಬಗ್ಗೆ ಅಮೂಲ್ಯ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್​ ಮಾಡಿದ್ದು, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ನನ್ನ ಪ್ರೀತಿಯ ಸಹೋದರ ದೀಪಣ್ಣ ಇಂದು ಬೆಳಗ್ಗೆ 6 ಗಂಟೆಗೆ ನಮ್ಮನ್ನು ಅಗಲಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಿನ್ನನ್ನು ಕಳೆದುಕೊಂಡು ನಾವು ತೀವ್ರ ನೋವಿನಲ್ಲಿದ್ದೇವೆ. ನೀವು ಎಂದೆಂದಿಗೂ ನಮ್ಮೊಂದಿಗೆ ಇರುತ್ತೀರಿ ಎಂದು ಅಮೂಲ್ಯ ಪೋಸ್ಟ್ ಮಾಡಿದ್ದಾರೆ.

ಮಲ್ಲೇಶ್ವರಂ ಸಮೀಪದ ನಿವಾಸದಲ್ಲಿ ದೀಪಕ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು, ನಟರುಗಳಾದ ಗಣೇಶ್, ನೆನಪಿರಲಿ ಪ್ರೇಮ್ ಮತ್ತಿತರ ಸ್ಯಾಂಡಲ್‌ವುಡ್ ಗಣ್ಯರು ಅಂತಿಮ ದರ್ಶನ ಪಡೆದರು.

ಸುಮನಹಳ್ಳಿಯ ರುದ್ರಭೂಮಿಯಲ್ಲಿ ದೀಪಕ್ ಅರಸ್ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.