ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ವಿಧಿವಶರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸುಮಾರು 8.30 ಕ್ಕೆ ಕಿದ್ವಾಯಿ ಆಸ್ಪತ್ರೆಯಲ್ಲೇ ಉಮೇಶ್ ಕೊನೆಯುಸಿರೆಳೆದಿದ್ದಾರೆ.
ಮಧ್ಯಾಹ್ನ 2 ಗಂಟೆವರೆಗೂ ಉಮೇಶ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಟ್ಟು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದವರು.ಚಿಕ್ಕವಯಸಿನಿಂದಲೇ ಬಣ್ಣ ಹಚ್ಚಿದ್ದರು. ರಂಗಭೂಮಿ ಮತ್ತು ಚಲನಚಿತ್ರ ಎರಡರಲ್ಲೂ 1948ರಿಂದಲೂ ನಟಿಸುತ್ತಿದ್ದರು.
ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ,ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ಮುಸ್ಸಂಜೆ ಮಾತು ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಅಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ ಈ ಡೈಲಾಗ್ ಗಳು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿವೆ.ಈ ಡೈಲಾಗ್ ಗಳನ್ನು ಬಹಳಷ್ಟು ಮಂದಿ ಈಗಲೂ ಸ್ಮರಿಸುತ್ತಾರೆ.
ಚಿತ್ರರಂಗದ ಗಣ್ಯರು,ನಟ,ನಟಿಯರು,ಕಲಾವುದರು ಅಂತಿಮ ನಮನ ಸಲ್ಲಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು,ರಾಜಕೀಯ ನಾಯಕರು ಉಮೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
